Law

ಪ್ರಾಥಮಿಕ ತನಿಖೆ ಅಗತ್ಯವಿಲ್ಲದೆ ಎಫ್‌ಐಆ‌ರ್ ದಾಖಲಿಸಲು ವಿಳಂಬ ಮಾಡಿದರೆ ಪೊಲೀಸರ ವಿರುದ್ಧ ಕ್ರಮ

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.

ಬೆಂಗಳೂರು: ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ಕುರಿತು ಮಾಹಿತಿ/ದೂರು ನೀಡಿದಾಗ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎಂದು ಹೈಕೋರ್ಟ್ ರಾಜ್ಯ ಪೊಲೀಸರಿಗೆ ಆದೇಶಿಸಿದೆ.

ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲು ಬಬಲೇಶ್ವರ ಠಾಣೆ ಪೊಲೀಸರು ನಿರಾಕರಿಸಿದ್ದರು. 2022ರ ನವೆಂಬರ್ 18ರಂದು ದೂರುದಾರರು ಬಬಲೇಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತಮ್ಮ ಸೊಸೆಯ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ವಿವರಿಸಿದ್ದರು. ದೂರಿನ ಮೇರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪೊಲೀಸರ ನಡವಳಿಕೆಯನ್ನು ಕಟುವಾಗಿ ಟೀಕಿಸಿದೆ. ಪ್ರಕರಣ ಹೈಕೋರ್ಟ್ ಮೆಟ್ಟಿಲೇರುವವರೆಗೂ ಎಫ್ಐಆರ್ ದಾಖಲಿಸದಿರುವುದು ಕರ್ತವ್ಯ ಲೋಪವಾಗಿದೆ. ಈ ಸಂಬಂಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ. ಅಲ್ಲದೇ, ಗಂಭೀರ ಸ್ವರೂಪದ ಅಪರಾಧದ ದೂರುಗಳು ಬಂದಾಗ ಪ್ರಾಥಮಿಕ ತನಿಖೆ ನಡೆಸುವ ಅಗತ್ಯವಿಲ್ಲ. ಏಳು ದಿನಗಳ ಒಳಗಾಗಿ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಿ ಎಫ್‌ಐಆರ್ ದಾಖಲಿಸಬೇಕು. ಈ ಸಂಬಂಧ ಪೊಲೀಸ್ ಠಾಣಾ ಡೈರಿಯಲ್ಲಿ ತನಿಖೆಯ ಸಂಪೂರ್ಣ ಮಾಹಿತಿ ಉಲ್ಲೇಖಿಸಬೇಕು ಎಂದು ಹೈಕೋರ್ಟ್ ಪೊಲೀಸರಿಗೆ ನಿರ್ದೇಶಿಸಿದೆ.

ಅಲ್ಲದೇ, ಗಂಭೀರ ಸ್ವರೂಪದ ಆರೋಪಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಾಗ ಪೊಲೀಸರು ಎಫ್ಐಆರ್ ದಾಖಲಿಸದ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ದೂರುದಾರರು ನ್ಯಾಯಾಲಯಗಳ ಮೊರೆ ಹೋಗುತ್ತಿದ್ದಾರೆ. ಈ ಕುರಿತಂತೆ ಪೊಲೀಸರಿಗೆ ಎಫ್ಐಆರ್ ದಾಖಲಿಸುವ ಕುರಿತಂತೆ ಸುಪ್ರೀಂಕೋರ್ಟ್ ‘ಲಲಿತಾಕುಮಾರಿ ವರ್ಸಸ್ ಉತ್ತರ ಪ್ರದೇಶ’ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ನು ತಲುಪಿಸುವಂತೆ ಆದೇಶಿಸಿದೆ. ಈ ಪ್ರಕರಣದ ತೀರ್ಪಿನ 120ನೇ ಪ್ಯಾರಾದಲ್ಲಿರುವ ಸಾರಾಂಶವನ್ನು ರಾಜ್ಯದ ಪೊಲೀಸ್ ಠಾಣೆಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಒದಗಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.

ಲಲಿತಾ ಕುಮಾರಿ ಪ್ರಕರಣದ ನಿರ್ದೇಶನಗಳು:

*ಪ್ರಕರಣ ಸಂಜ್ಞೇಯ ಅಪರಾಧ ಎಂದು ತಿಳಿಯುತ್ತಿದ್ದಂತೆಯೇ ಯಾವುದೇ ಪ್ರಾಥಮಿಕ ತನಿಖೆ ನಡೆಸದೆ ತಕ್ಷಣ ಎಫ್‌ಐಆರ್ ದಾಖಲಿಸಬೇಕು.

*ಸ್ವೀಕರಿಸಿದ ದೂರಿನ ಮಾಹಿತಿಯ ಪ್ರಕಾರ ಪ್ರಕರಣ ಸಂಜ್ಞೇಯವಲ್ಲ ಎಂದು ತಿಳಿದು ಬಂದಲ್ಲಿ ಅದನ್ನು ಖಚಿತ ಪಡಿಸಿಕೊಳ್ಳುವುದಕ್ಕೆ ಮಾತ್ರ ಪ್ರಾಥಮಿಕ ತನಿಖೆ ನಡೆಸಬೇಕು.

*ಪ್ರಕರಣ ಸಂಜ್ಞೆಯ ಎಂದು ಗೊತ್ತಾದರೆ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು.

*ಒಂದು ವೇಳೆ ಪ್ರಾಥಮಿಕ ವಿಚಾರಣೆಯ ಬಳಿಕ ದೂರನ್ನು ಮುಕ್ತಾಯ ಮಾಡುವಂತಿದ್ದರೆ ದೂರುದಾರರಿಗೆ ಒಂದು ವಾರದ ಒಳಗೆ ಮಾಹಿತಿ ನೀಡಬೇಕು. ಅಲ್ಲದೇ, ದೂರನ್ನು ಮುಕ್ತಾಯಗೊಳಿಸುತ್ತಿರುವ ಸಂಕ್ಷಿಪ್ತ ಕಾರಣಗಳನ್ನು ಒದಗಿಸಬೇಕು.

*ಸಂಜ್ಞೇಯ ಅಪರಾಧದ ಪ್ರಕರಣ ಎಂದು ತಿಳಿದ ತಕ್ಷಣವೇ ಎಫ್‌ಐಆರ್ ದಾಖಲಿಸುವುದು ಠಾಣಾ ಮುಖ್ಯಸ್ಥರ ಕರ್ತವ್ಯ.

*ಒಂದು ವೇಳೆ ಸಂಜ್ಞೇಯ ಅಪರಾಧ ಎಂದು ಗೊತ್ತಿದ್ದರೂ ದೂರು ದಾಖಲಿಸದಿದ್ದಲ್ಲಿ ಅಂತಹ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.

*ಪ್ರಾಥಮಿಕ ತನಿಖೆ ನಡೆಸುವುದಾದಲ್ಲಿ ಕೇವಲ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಲ್ಲ. ಬದಲಿಗೆ ಸಲ್ಲಿಸಿರುವ ದೂರಿನಲ್ಲಿ ಸಂಜ್ಞೇಯ ಅಪರಾಧ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮಾತ್ರ ನಡೆಸಬೇಕು.

*ಯಾವೆಲ್ಲ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆಸಬಹುದು?

*ಕೌಟುಂಬಿಕ ವ್ಯಾಜ್ಯಗಳು.

*ವಾಣಿಜ್ಯ ಅಪರಾಧಗಳು.

*ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳು.

*ಭ್ರಷ್ಟಾಚಾರ ಆರೋಪದ ಪ್ರಕರಣಗಳು.

*ಮೂರು ತಿಂಗಳು ವಿಳಂಬವಾಗಿರುವ ಕ್ರಿಮಿನಲ್‌ ಪ್ರಕರಣಗಳು.

*ಆರೋಪಿ ಹಾಗು ದೂರುದಾರರ ಹಕ್ಕುಗಳ ರಕ್ಷಣೆ ಖಾತ್ರಿಪಡಿಸುವ ಸಂದರ್ಭದಲ್ಲಿ ಮಾತ್ರ ಪ್ರಾಥಮಿಕ ವಿಚಾರಣೆ ನಡೆಸಬಹುದು. ಅದು ಏಳು ದಿನಗಳನ್ನು ಮೀರಬಾರದು.

*ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನು ಠಾಣಾ ಡೈರಿಯಲ್ಲಿ ನಮೂದಿಸಬೇಕು.

*ಠಾಣಾ ಡೈರಿಯು ದೂರು ಸ್ವೀಕಾರದ ಮಾಹಿತಿ ದಾಖಲೆಯಾಗಿದ್ದು, ಎಫ್‌ಐಆರ್ ನೋಂದಣಿ, ತನಿಖೆಗೆ ಅಗತ್ಯವಿರುವ ಸಂಜ್ಞೆಯ ಅಪರಾಧಗಳ ಕುರಿತ ಸಂಪೂರ್ಣ ಮಾಹಿತಿ ದಾಖಲಿಸಬೇಕು. ಜತೆಗೆ, ಪ್ರಾಥಮಿಕ ವಿಚಾರಣೆ ನಡೆಸುವ ಪೊಲೀಸರ ನಿರ್ಧಾರವನ್ನು ಸಹ ದಾಖಲಿಸಿರಬೇಕು.


Share It

You cannot copy content of this page