ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಪೊಲೀಸ್ ಅಧಿಕಾರಿ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡುವ ಮೂಲಕ ಮಾನನಷ್ಟ ಅಪರಾಧ ಕೃತ್ಯ ಎಸಗಿದ ಆರೋಪ ಪ್ರಕರಣದಲ್ಲಿ ಹೈಕೋರ್ಟ್ ಪತ್ರಕರ್ತರೊಬ್ಬರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ವಿಚಾರಣಾ ನ್ಯಾಯಾಲಯ ಆರೋಪಿ ಪತ್ರಕರ್ತನನ್ನು ಖುಲಾಸೆಗೊಳಿಸಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಚಾಮರಾಜನಗರ ಡಿವೈಎಸ್ಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪ್ರತಿವಾದಿ ಪತ್ರಕರ್ತ ಪ್ರಕಟಿಸಿರುವ ಲೇಖನಗಳು ಮಾನಹಾನಿಕರ ಆರೋಪಗಳನ್ನು ಹೊಂದಿವೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಿ ವಿರುದ್ಧ ಯಾವುದೇ ದೂರುಗಳು ದಾಖಲಾಗಿಲ್ಲ. ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದಾಗ ಅದು ಮಾನನಷ್ಟಕ್ಕೆ ಸಮನಾಗುತ್ತದೆ. ಹೀಗಾಗಿ, ವಿಚಾರಣಾ ನ್ಯಾಯಾಲಯ ಆರೋಪಿ ಪತ್ರಕರ್ತನನ್ನು ಖುಲಾಸೆಗೊಳಿಸಿರುವ ಕ್ರಮ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಪತ್ರಿಕೆಯ ಸಂಪಾದಕರು ತಾವು ಪ್ರಕಟಿಸಿರುವ ಲೇಖನಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಲೇಖನದಲ್ಲಿ ಪ್ರಕಟಿಸಿರುವ ಆರೋಪಗಳಿಗೆ ಪೂರಕ ದಾಖಲೆಗಳನ್ನಾಗಲೀ ಅಥವಾ ಅಧಿಕಾರಿ ವಿರುದ್ಧ ಸಾರ್ವಜನಿಕರು ದೂರು ನೀಡಿದ ಕುರಿತಾಗಲೀ ದಾಖಲೆಗಳನ್ನು ಸಲ್ಲಿಸಿಲ್ಲ. ಹೀಗೆ ತಾವು ಅಧಿಕಾರಿ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ಯಾವುದೇ ಪೂರಕ ಸಾಕ್ಷ್ಯ ನೀಡಿಲ್ಲ ಹಾಗೂ ಪ್ರಕಟಣೆಯುನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಮಾಡಲಾಗಿದೆ ಎಂಬುದನ್ನು ಕೂಡ ರುಜುವಾತು ಮಾಡಿಲ್ಲ. ಹೀಗಾಗಿ ಸಂಪಾದಕರು ಪ್ರಕರಣದಲ್ಲಿ ದೋಷಿಯಾಗಿದ್ದಾರೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಹಾಗೆಯೇ, ಆರು ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಹಿನ್ನೆಲೆ: ಶಿಕ್ಷೆಗೆ ಗುರಿಯಾಗಿರುವ ಹಿರಿಯ ಪತ್ರಕರ್ತ, ಚಾಮರಾಜನಗರದ ಡಿವೈಎಸ್ಪಿ ವಿರುದ್ಧ ತಮ್ಮ ಪತ್ರಿಕೆಯಲ್ಲಿ ಲೇಖನಗಳನ್ನು ಪ್ರಕಟಿಸಿದ್ದರು. ಅವುಗಳಲ್ಲಿ ಪೊಲೀಸ್ ಅಧಿಕಾರಿಯು ತನ್ನ ವ್ಯಾಪ್ತಿಯಲ್ಲಿ ಅನಧಿಕೃತ ಹಾಗೂ ಕಾನೂನು ಬಾಹಿರ ಕೃತ್ಯಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟು, ಅದಕ್ಕೆ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವಿಚಾರವಾಗಿ ಡಿವೈಎಸ್ಪಿ, ಪತ್ರಕರ್ತನ ವಿರುದ್ಧ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಜತೆಗೆ, ಪತ್ರಿಕೆಯಲ್ಲಿ ಮಾಡಿರುವ ಆರೋಪಗಳಿಂದ ತನ್ನ ಖ್ಯಾತಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ಪತ್ರಕರ್ತನನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪೊಲೀಸ್ ಅಧಿಕಾರಿ ಹೈಕೋರ್ಟ್ ಮೊರೆ ಹೋಗಿದ್ದರು.
(CRL.A No. 1094 of 2013)

