News

ಹೆಚ್ಚು ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಪಟ್ಟಿ ಮಾಡಿ ಆಸ್ತಿ ತೆರಿಗೆ ವಸೂಲಿ: ಮಹೇಶ್ವರ್ ರಾವ್

Share It

ಬೆಂಗಳೂರು: ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಪಟ್ಟಿ ಮಾಡಿ ಆಸ್ತಿ ತೆರಿಗೆ ವಸೂಲಿ ಮಾಡಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಬಿಎ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ, ಇ-ಖಾತಾ, ಬಿ ಖಾತಾಯಿಂದ ಎ-ಖಾತಾಗೆ ಪರಿವರ್ತನೆ ಮಾಡುವ ಕುರಿತು ಸೋಮವಾರ ನಡೆದ ವರ್ಚ್ಯುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಯಾ ನಗರ ಪಾಲಿಕೆಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು, ಆಸ್ತಿ ತೆರಿಗೆ ಪರಿಷ್ಕರಣೆ ಪ್ರಕರಣಗಳನ್ನು ಪತ್ತೆ ಹಚ್ಚಿ ಅದರಿಂದ ಬಾಕಿ ಬರಬೇಕಿರುವ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಸೂಚಿಸಿದರು.

ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಹುಡುಕಿ, ಅವರನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಕೆಲಸ ಮಾಡಬೇಕು. ಆಯಾ ನಗರ ಪಾಲಿಕೆಗಳ ಆಯುಕ್ತರುಗಳು ಆಸ್ತಿ ತೆರಿಗೆ ಸಂಗ್ರಹಿಸುವ ಸಲುವಾಗಿ ಹೆಚ್ಚು ಗಮನ ನೀಡಬೇಕು. ಈ ಸಂಬಂಧ ಪ್ರತಿನಿತ್ಯ ಕಂದಾಯ ಅಧಿಕಾರಿಗಳ ಜೊತೆ ಪರಿಶೀಲನೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿ, ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾತನಾಡಿ, ನಗರದ 5 ನಗರ ಪಾಲಿಕೆಗಳಲ್ಲಿ 6700 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈವರೆಗೆ 3533 ಕೋಟಿ ರೂ. ಸಂಗ್ರಹಿಸಲಾಗಿದೆ. ಈ ಪೈಕಿ ಆಸ್ತಿ ತೆರಿಗೆ ಸಂಗ್ರಹಿಸಲು ಹೆಚ್ಚು ಗಮನ ನೀಡಿ ಪರಿಷ್ಕರಣೆ ಪ್ರಕರಣಗಳು ಹಾಗೂ ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಿಸಲು ಸೂಚನೆ ನೀಡಿದರು.

24 ಸಾವಿರ ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳು:

5 ನಗರ ಪಾಲಿಕೆಗಳಲ್ಲಿ 24 ಸಾವಿರ ಆಸ್ತಿಗಳ ಆಸ್ತಿತೆರಿಗೆ ಪರಿಷ್ಕರಣೆ ಪ್ರಕರಣಗಳಿದ್ದು, ಅದರಿಂದ ಸುಮಾರು 170 ಕೋಟಿ ರೂ. ಸಂಗ್ರಹಿಬೇಕಿದೆ. ಅಲ್ಲದೆ ಸುಮಾರು 22 ಸಾವಿರ ಸುಸ್ತಿದಾರರಿಂದ 598 ಕೋಟಿ ರೂ. ಬರಬೇಕಿದ್ದು, ಅದರ ಮೇಲೆ ಹೆಚ್ಚು ಗಮನ ನೀಡಿ ಸಂಗ್ರಹಿಸಲು ತಿಳಿಸಿದರು.

ಸೀಲ್ ಮಾಡಿ ಬಾಕಿ ಹಣ ವಸೂಲಿ ಮಾಡಿ:

ಆಯಾ ನಗರ ಪಾಲಿಕೆಗಳಲ್ಲಿ ವಿಭಾಗವಾರು 100 ಪರಿಷ್ಕರಣೆ ಪ್ರಕರಣಗಳು, 100 ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರನ್ನು ಪಟ್ಟಿ ಮಾಡಿಕೊಂಡು, ಕಂದಾಯ ಪರಿವೀಕ್ಷಕರು/ಕಂದಾಯ ವಸೂಲಿಗಾರರಿಗೆ ನಿಗದಿತ ಗುರಿ ನೀಡಿ ವಾಣಿಜ್ಯ ಸ್ವತ್ತುಗಳನ್ನು ಸೀಲ್ ಮಾಡಿ ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡಬೇಕೆಂದು ಎಂದು ಹೇಳಿದರು.

ಕೂಡಲೆ ಖಾತೆ ನೀಡುವ ಕಾರ್ಯ:

ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಖಾತಾಗಳನ್ನು ಪಡೆಯಲು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಅವುಗಳಿಗೆ ಕೂಡಲೆ ಖಾತೆ ನೀಡುವ ಕಾರ್ಯವಾಗಬೇಕು. ಇದರಿಂದ ಪಾಲಿಕೆಗೆ ಹೆಚ್ಚು ಆದಾಯ ಬರಲಿದೆ. ಅದಲ್ಲದೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆಗೆ ಬಂದಿರುವಂತಹ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗಾಗಿ ಎ-ಖಾತಾ ನೀಡುವ ಕೆಲಸ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರುಗಳಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್, ರಮೇಶ್ ಕೆ.ಎನ್, ಡಾ. ರಾಜೇಂದ್ರ ಕೆ.ವಿ, ಕಂದಾಯ ವಿಭಾಗದ ಅಪರ ಆಯುಕ್ತರು, ಜಂಟಿ ಆಯುಕ್ತರು, ಎನ್.ಐಸಿಯ ತಾಂತ್ರಿಕ ನಿರ್ದೇಶಕರು ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.


Share It

You cannot copy content of this page