ಬೆಂಗಳೂರು: ಎರವಲು ಸೇವೆ ಮೂಲಕ ಮತ್ತೊಂದು ಇಲಾಖೆಯ ಸೇವೆಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಒಂದೇ ಹುದ್ದೆಯಲ್ಲಿ ಎರಡು ವರ್ಷ ಮುಂದುವರೆಸಬೇಕು ಎಂಬ ನಿಯಮ ಕಡ್ಡಾಯವಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ತಮ್ಮನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ತಹಶೀಲ್ದಾರ್ ಒಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಅರ್ಜಿದಾರ ಅಧಿಕಾರಿಯನ್ನು ಆನೇಕಲ್ ನಿಂದ ಬೆಂಗಳೂರು ದಕ್ಷಿಣ ತಾಲ್ಲೂಕಿಗೆ ಒಂದೂವರೆ ವರ್ಷದಲ್ಲೇ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿರಲಿಲ್ಲ. ಅದರ ಬದಲಾಗಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಿದ ನಂತರ ನ್ಯಾಯಾಲಯದ ಕದ ತಟ್ಟಿದ್ದಾರೆ. ಮಾತೃ ಇಲಾಖೆಗೆ ವರ್ಗಾವಣೆ ಮಾಡಿರುವುದು ಅವರಿಗೆ ಇಷ್ಟವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜೊತೆಗೆ, ಅಧಿಕಾರಿಗೆ ಇಷ್ಟವಿರುವ ಹುದ್ದೆಗೆ ನಿಯೋಜನೆ ಮಾಡಿದಾಗ ಅವರು ನ್ಯಾಯಾಲಯದ ಮೊರೆ ಹೋಗಲು ಮುಂದಾಗಿಲ್ಲ. ತಮಗಿಷ್ಟವಿಲ್ಲದ ವರ್ಗಾವಣೆ ಮಾಡಿದ ಬಳಿಕ ಅರ್ಜಿ ಸಲ್ಲಿಸಿದ್ದಾರೆ ಅವರ ಕೋರಿಕೆಯಲ್ಲಿ ಪ್ರಾಮಾಣಿಕತೆ ಇಲ್ಲ. ಸರ್ಕಾರ ಯಾವುದೇ ಇಲಾಖೆಯಲ್ಲಿ ಹುದ್ದೆ ಖಾಲಿ ಇದ್ದಾಗ ಮತ್ತೊಂದು ಇಲಾಖೆಯಿಂದ ಎರವಲು ಸೇವೆ ಪಡೆದುಕೊಳ್ಳುತ್ತದೆ. ಅರ್ಜಿದಾರರ ಸ್ಥಾನಕ್ಕೆ ಕಂದಾಯ ಇಲಾಖೆಯ ಮತ್ತೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಆ ಅಧಿಕಾರಿಯನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಅಲ್ಲದೇ, ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ಅಧಿಕಾರಿಯನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಿದೆ ಎಂದು ಹೈಕೋರ್ಟ್ ಹೇಳಿದೆ.
ಇದೇ ವೇಳೆ, ನಿಯೋಜಿತ ಹುದ್ದೆಯಲ್ಲಿ ಎರಡು ವರ್ಷ ಪೂರ್ಣಗೊಳಿಸಿಲ್ಲ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ಹೈಕೋರ್ಟ್, ಒಂದು ಇಲಾಖೆಯ ಅಧಿಕಾರಿಯಿಂದ ಮತ್ತೊಂದು ಇಲಾಖೆಯು ಎರವಲು ಸೇವೆ ಪಡೆದುಕೊಂಡಿದ್ದು, ಎರಡು ಕಡೆ ಅವರು ಸೇವೆ ಸಲ್ಲಿಸಿದ್ದಾರೆ. ಎರಡೂ ಹುದ್ದೆಗಳ ಸೇವಾವಧಿಯನ್ನು ಪರಿಗಣಿಸಿದರೆ ಎರಡು ವರ್ಷ ಪೂರ್ಣಗೊಂಡಿದೆ. ಅಲ್ಲದೆ, ಎರವಲು ಸೇವೆ ಪಡೆದುಕೊಂಡ ಸಂದರ್ಭದಲ್ಲಿ ಎರಡು ವರ್ಷ ಸೇವೆ ಸಲ್ಲಿಸಬೇಕು ಎಂಬ ನಿಯಮ ಕಡ್ಡಾಯವಿಲ್ಲ. ಹೀಗಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ನೀಡಿರುವ ಆದೇಶದಲ್ಲಿ ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಅಧಿಕಾರಿ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ ಕಂದಾಯ ಇಲಾಖೆಗೆ ಗ್ರೇಡ್ 1 ತಹಶೀಲ್ದಾರ್ ಆಗಿ ಎರವಲು ಸೇವೆ ಮೂಲಕ ನಿಯೋಜನೆಗೊಂಡಿದ್ದರು. ಒಂದೂವರೆ ವರ್ಷ ಆನೇಕಲ್ನಲ್ಲಿ ಮತ್ತು 8 ತಿಂಗಳು ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ತಹಶಿಲ್ದಾರ್ ಆಗಿ ಸೇವೆ ಸಲ್ಲಿಸಿದ ಬಳಿಕ ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿತ್ತು.
ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು. ಕೆಎಟಿ ಅರ್ಜಿ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.

