News

ಹಿಂಬದಿ ಸವಾರನ ಸಾವಿಗೆ ಬೈಕ್ ಮಾಲಿಕ ಪರಿಹಾರ ಪಾವತಿಸಬೇಕು: ಹೈಕೋರ್ಟ್

Share It

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಹಿಂಬದಿ ಸವಾರ ಮೂರನೇ ವ್ಯಕ್ತಿ (ಥರ್ಡ್ ಪಾರ್ಟಿ) ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬೈಕ್ ನ ಹಿಂಬದಿ ಸವಾರನ ಸಾವಿಗೆ ಬೈಕ್ ಮಾಲಿಕನೇ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ.

ಇದೇ ವೇಳೆ ತುಮಕೂರಿನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ ಇನ್ಸ್ಯೂರೆನ್ಸ್ ಕಂಪನಿಗೆ ಪರಿಹಾರ ಪಾವತಿಸಲು ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೇ, ನ್ಯಾಯಮಂಡಳಿ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಮೃತನ ಕುಟುಂಬಸ್ಥರಿಗೆ ನೀಡುವಂತೆ ವಾಹನದ (ಹೀರೋ ಹೋಂಡಾ ಬೈಕ್) ಮಾಲೀಕ ನಿಸಮ್ಮುದ್ದೀನ್ ಅವರಿಗೆ ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2011 ರ ಮಾರ್ಚ್ 24 ರಂದು ಮೃತ ಸಿದ್ದಿಕ್ಉಲ್ಲಾ ಖಾನ್ ಎಂಬುವವರು ಕುಣಿಗಲ್ ಬಳಿ ನಿಸಾಮುದ್ದೀನ್ ಅವರ ಬೈಕ್‌ನಲ್ಲಿ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿದ್ದರು. ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಹೀರೋ ಹೋಂಡಾ ಬೈಕ್‌ ಹಳ್ಳಕ್ಕೆ ಬಿದ್ದಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡ ಖಾನ್ ಅವರನ್ನು ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾರ್ಚ್ 26, 2011 ರಂದು ಖಾನ್ ಮೃತಪಟ್ಟಿದ್ದರು.

ನಂತರ ಖಾನ್ ಕುಟುಂಬ ಸದಸ್ಯರು ಪರಿಹಾರ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೇ ಖಾನ್ ಚಿಕಿತ್ಸೆ ಮತ್ತು ಇತರ ವೆಚ್ಚಗಳಿಗಾಗಿ 1.2 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಒಟ್ಟು 15 ಲಕ್ಷ ರೂಪಾಯಿ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕುಣಿಗಲ್ ನ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ 2017 ರ ಆಗಸ್ಟ್ 24 ರಂದು, ವಾರ್ಷಿಕ ಶೇ 6% ಬಡ್ಡಿಯೊಂದಿಗೆ 7,27,114 ರೂ.ಗಳನ್ನು ಪರಿಹಾರವಾಗಿ ನೀಡುವಂತೆ ವಿಮಾ ಸಂಸ್ಥೆಗೆ ಆದೇಶಿಸಿತ್ತು.

ನ್ಯಾಯಮಂಡಳಿ ನೀಡಿರುವ ಪರಿಹಾರ ಕಡಿಮೆ ಆಗಿದೆ ಎಂದು ಖಾನ್ ಕುಟುಂಬ ಸದಸ್ಯರು ಹಾಗೂ ಪರಿಹಾರ ಪಾವತಿಸಲು ನೀಡಿರುವ ಆದೇಶ ಸರಿ ಇಲ್ಲವೆಂದು ವಿಮಾ ಸಂಸ್ಥೆ ನ್ಯಾಷನಲ್ ಇನ್ಸ್ಯೂರೆನ್ಸ್ ಪ್ರತಿನಿಧಿಗಳು ಹೈಕೋರ್ಟ್ ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ವಿಚಾರಣೆ ವೇಳೆ ವಾದ ಮಂಡಿಸಿದ್ದ ವಿಮಾ ಸಂಸ್ಥೆ ಪರ ವಕೀಲರು, ತಾವು ನೀಡಿರುವುದು ‘ಆಕ್ಟ್-ಓನ್ಲಿ ಪಾಲಿಸಿ’. ಈ ವಿಮೆಯು ದ್ವಿಚಕ್ರ ವಾಹನದಲ್ಲಿ ಉಚಿತ ಪ್ರಯಾಣಿಕರಾಗಿದ್ದ ಹಿಂಬದಿಯ ಸವಾರನನ್ನು ಒಳಗೊಂಡಿಲ್ಲ ಮತ್ತು ಅದಕ್ಕಾಗಿ ಯಾವುದೇ ಹೆಚ್ಚುವರಿ ಪ್ರೀಮಿಯಂ ಅನ್ನು ಸಂಗ್ರಹಿಸಿಲ್ಲ. ಆದ್ದರಿಂದ ಹಿಂಬದಿ ಸವಾರನಿಗೆ ಪರಿಹಾರ ಪಾವತಿಸುವ ಹೊಣೆ ತಮ್ಮದಲ್ಲ ಎಂದು ವಾದಿಸಿದ್ದರು.

ಹೈಕೋರ್ಟ್ ತೀರ್ಪು: ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ನಿಸಾಮ್ಮುದ್ದೀನ್ ಅವರ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಮತ್ತು ಈ ಅಪಘಾತದಲ್ಲಿ ಬೇರೆ ಯಾವುದೇ ವಾಹನ ಒಳಗೊಂಡಿಲ್ಲ. “ಇದು ‘ಆಕ್ಟ್ ಓನ್ಲಿ ಪಾಲಿಸಿ’ ಆಗಿದೆ ಮತ್ತು ಇದರ ಅಡಿ ಓನರ್-ಕಮ್-ಡ್ರೈವರ್ ಗೆ  ₹1 ಲಕ್ಷಕ್ಕೆ ಪರಿಹಾರ ಸೀಮಿತವಾಗಿದೆ. ಪಾಲಿಸಿಯಲ್ಲಿ ಎಲ್ಲಿಯೂ ಪಿಲಿಯನ್ ರೈಡರ್ ಎಂದು ಉಲ್ಲೇಖಿಸಲಾಗಿಲ್ಲ ಅಥವಾ ಪಾಲಿಸಿ ಅಡಿಯಲ್ಲಿ ಅಂತವರಿಗೆ ಕವರೇಜ್ ಇದೆ ಎಂದು ಹೇಳಿಲ್ಲ. ಹಾಗಿದ್ದೂ ವಾಹನದ ಆಸನದ ಸಾಮರ್ಥ್ಯವು ‘1+1’ ಆಗಿದ್ದು, ಅದರ ಆಧಾರದ ಮೇಲೆ ನ್ಯಾಯಮಂಡಳಿಯು ವಿಮಾ ಕಂಪನಿಯ ಮೇಲೆ ಪರಿಹಾರ ನೀಡುವ ಹೊಣೆಗಾರಿಕೆಯನ್ನು ನಿಗದಿಪಡಿಸಿದೆ, ನ್ಯಾಯಾಧಿಕರಣದ ಆದೇಶ ಸೂಕ್ತವಾಗಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಹಾಗೆಯೇ ಪರಿಹಾರ ಪಾವತಿಸುವ ಹೊಣೆಯನ್ನು ಬೈಕ್ ಮಾಲಿಕನಿಗೆ ವರ್ಗಾಯಿಸಿದೆ.


Share It

You cannot copy content of this page