Law

ಡ್ರಗ್ ಕೇಸ್: ಜಾಗದ ಮಾಲಿಕನಿಗೆ ಮಾಹಿತಿ ಇಲ್ಲದಿದ್ದರೆ ಕ್ರಮ ಜರುಗಿಸಲಾಗದು

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.

ಡ್ರಗ್ಸ್ ಬಳಕೆ ಮಾಡುತ್ತಾರೆ ಎಂಬ ವಿಚಾರ ತಿಳಿದಿದ್ದೂ ಅಂತವರಿಗೆ ಅವಕಾಶ ನೀಡಿದರೆ ಮಾತ್ರ ಜಾಗದ ಮಾಲಿಕನ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬಹುದು. ಒಂದೆ ವೇಳೆ ಡ್ರಗ್ಸ್ ಬಳಕೆ ಮಾಡುವುದು ಅವರಿಗೆ ತಿಳಿದಿಲ್ಲವಾದರೆ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಕ್ರಮ ಜರುಗಿಸಲಾಗದು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ತಮ್ಮ ವಿರುದ್ಧ ಬೆಂಗಳೂರಿನ ಸಿಸಿಬಿ ಪೊಲೀಸರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯ ಸೆಕ್ಷನ್ 8(c), 22, 25, 27(a) 27(b) ಹಾಗೂ ಐಪಿಸಿ ಸೆಕ್ಷನ್ 290, 294 ಅಡಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ರೆಡ್ಡಿ ಎಂಬುವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಅರ್ಜಿದಾರರಿಗೆ ತಮ್ಮ ಮಾಲಿಕತ್ವದ ಜಾಗದಲ್ಲಿ ಏನು ನಡೆಯುತ್ತಿತ್ತು ಎಂಬುದರ ಅರಿವಿಲ್ಲ. ಅವರಿಗೆ ಸೇರಿದ ಜಾಗವನ್ನು ಮ್ಯಾನೇಜರ್ ಮೂಲಕ ಬಾಡಿಗೆಗೆ ನೀಡಿದ್ದಾರೆ. ಹೀಗಾಗಿ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು, ಸಿಸಿಬಿ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿದೆ. ಇದೇ ವೇಳೆ ಇತರೆ ಆರೋಪಿತರ ವಿರುದ್ಧದ ವಿಚಾರಣೆಗೆ ಈ ಆದೇಶ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಲ್ಲದೇ, ಅರ್ಜಿದಾರರು ತಮ್ಮ ಜಾಗವನ್ನು ನೋಡಿಕೊಳ್ಳಲು ಮ್ಯಾನೇಜರ್ ನೇಮಕ ಮಾಡಿದ್ದು, ಬೇರೆಡೆ ವಾಸವಿದ್ದಾರೆ. ಅವರ ಮೂಲಕ ಇತರೆ ಆರೋಪಿತರು ಬರ್ತಡೇ ಪಾರ್ಟಿಗೆಂದು ಜಾಗವನ್ನ ಬಾಡಿಗೆಗೆ ಪಡೆದಿದ್ದಾರೆ. ಇದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹೀಗಾಗಿ ಅರ್ಜಿದಾರರಿಗೆ ತಮ್ಮ ಮಾಲಿಕತ್ವದ ಜಾಗದಲ್ಲಿ ಏನು ನಡೆಯುತ್ತಿತ್ತು ಎಂಬುದರ ಅರಿವಿರಲಿಲ್ಲ. ಹೀಗಿದ್ದೂ ಅವರ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರೆಸಲು ಬಿಟ್ಟರೆ ಅದು ಕಾನೂನಿನ ದುರುಪಯೋಗವಾಗಲಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: 2024ರ ಮೇ 19ರಂದು ಕೆಲ ವ್ಯಕ್ತಿಗಳು ನಗರದ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ಸ್ ಒಂದರಲ್ಲಿ ಬರ್ತಡೇ ಪಾರ್ಟಿ ಕಾರ್ಯಕ್ರಮ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಸೇರಿದ್ದ 100 ರಿಂದ 150 ಯುವಕ-ಯುವತಿಯರು ಎಂ.ಡಿ.ಎಂ.ಎ, ಪಿಲ್ಸ್, ಕೊಕೇನ್, ಹೈಡ್ರೋಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿದ್ದಾರೆ ಮತ್ತು ಕೆಲ ವ್ಯಕ್ತಿಗಳು ಇವರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮಾದಕವಸ್ತುಗಳಗಳನ್ನು ಜಪ್ತಿ ಮಾಡಿ, ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿದ್ದರು. ದಾಳಿ ಬಳಿಕ ಜಾಗದ ಮಾಲಿಕರನ್ನೂ ಪ್ರಕರಣದಲ್ಲಿ ಆರೋಪಿಯಾಗಿ ಸೇರಿಸಲಾಗಿತ್ತು. ತಮಗೆ ಮಾಹಿತಿ ಇಲ್ಲದಿದ್ದರೂ ತಮ್ಮನ್ನು ಪ್ರಕರಣದಲ್ಲಿ ಸೇರಿಸಿರುವ ಕ್ರಮ ಸೂಕ್ತವಲ್ಲ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

(WRIT PETITION No.13943 OF 2024)


Share It

You cannot copy content of this page