ನವದೆಹಲಿ/ಬೆಂಗಳೂರು: ಕಾರ್ಮಿಕರಿಗೆ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಜಾಗತಿಕ ಮಾನದಂಡಗಳಾದ ಸ್ವಚ್ಛ ಪರಿಸರ ವ್ಯವಸ್ಥೆ, ಉತ್ತಮ ವೇತನ, ಸುರಕ್ಷತೆ, ಸಾಮಾಜಿಕ ಭದ್ರತೆ ಮತ್ತು ವರ್ಧಿತ ಕಲ್ಯಾಣಕ್ಕಾಗಿ ಕಾರ್ಮಿಕ ಕಾನೂನುಗಳನ್ನು ಸರಳಗೊಳಿಸಿ ಸುಗಮಗೊಳಿಸಲು ಭಾರತ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ಘೋಷಣೆ ಮಾಡಿದೆ.
ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2025 ಅನ್ನು 2025ರ ನವೆಂಬರ್ 21 ರಿಂದ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ. ಪ್ತಸ್ತುತ ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಪುನರ್ ವಿಮರ್ಶಿಸಿ, ಕಾರ್ಮಿಕ ನಿಯಮಾವಳಿಗಳನ್ನು ಆಧುನೀಕರಿಸಿ, ಕಾರ್ಮಿಕರ ಕಲ್ಯಾಣವನ್ನು ಹೆಚ್ಚಿಸುವ ಮೂಲಕ ಮತ್ತು ಅಭಿವೃದ್ಧಿ ಹೊಂದುತ್ತಿರುವ ಔದ್ಯೋಗಿಕ ಪ್ರಪಂಚದೊಂದಿಗೆ ಕಾರ್ಮಿಕ ಪರಿಸರ ವ್ಯವಸ್ಥೆಯನ್ನು ಜೋಡಿಸುವಲ್ಲಿ ಈ ಕ್ರಮ ಮಹತ್ವದ್ದಾಗಿದೆ.
ಭಾರತದ ಅನೇಕ ಕಾರ್ಮಿಕ ಕಾನೂನುಗಳನ್ನು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಆರಂಭದಲ್ಲಿನ ಆರ್ಥಿಕತೆ ಮತ್ತು ಔದ್ಯೋಗಿಕ ಪ್ರಪಂಚಕ್ಕೆ ತಕ್ಕಂತೆ ರೂಪಿಸಲಾಗಿತ್ತು. ಈ ನಿರ್ಬಂಧಿತ ಚೌಕಟ್ಟುಗಳು ಬದಲಾಗುತ್ತಿರುವ ಆರ್ಥಿಕ ಸುಧಾರಣೆಗಳು ಮತ್ತು ಬಳೆಯುತ್ತಿರುವ ಉದ್ಯೋಗದ ರೂಪಗಳೊಂದಿಗೆ ವೇಗವನ್ನು ಕಾಯ್ದುಕೊಳ್ಳಲು ಹೆಣಗಾಡುತ್ತಿದ್ದವು. ಅನಿಶ್ಚತತೆಯನ್ನು ಸೃಷ್ಟಿಸಿ, ಕಾರ್ಮಿಕರು ಮತ್ತು ಉದ್ಯಮಗಳೆರಡಕ್ಕೂ ಹೊರೆಯನ್ನು ಹೆಚ್ಚಿಸಿದ್ದವು. ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವು ವಸಾಹತುಶಾಹಿ ಯುಗದ ರಚನೆಗಳನ್ನು ಮೀರಿ ಆಧುನಿಕ ಜಾಗತಿಕ ಪ್ರವೃತ್ತಿಯನ್ನು ಪರಿಹರಿಸಿವೆ. ಒಟ್ಟಾರೆ ಈ ಸಂಹಿತೆಗಳು ಕಾರ್ಮಿಕರು ಮತ್ತು ಉದ್ಯಮಗಳೆರಡಕ್ಕೂ ಅಧಿಕಾರವನ್ನು ನೀಡಿವೆ.
