ಬೆಂಗಳೂರು: ಆನೇಕಲ್ ತಾಲ್ಲೂಕಿನ ಅಭಿಲೇಖಾಲಯ (ರೆಕಾರ್ಡ್ ರೂಮ್ಸ್) ಕಾರ್ಯಾಲಯದ ಕೆಲವು ಸಿಬ್ಬಂದಿಗಳು ಭೂಗಳ್ಳರ ಜೊತೆ ಶಾಮೀಲಾಗಿ ನಕಲಿ ದಾಖಲಾತಿಗಳನ್ನು ಸೇರಿಸಿ ಸರ್ಕಾರಿ ಜಮೀನುಗಳ ಕಬಳಿಕೆಗೆ ಸಹಕರಿಸಿರುವುದು ಕಂಡುಬಂದಿದ್ದು, ಒಟ್ಟು 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಉಪ ತಹಸಿಲ್ದಾರ ಚಂದ್ರಶೇಖರ್ ಬಿ.ಕೆ, ಶಿರಸ್ತೇದಾರರಾದ ಮಾರುತಿ ಪ್ರಸಾದ್, ದಿನಕರನ್ ಜಿ, ಲೋಕೇಶ್ ಎಸ್, ಪ್ರಥಮ ದರ್ಜೆ ಸಹಾಯಕರಾದ ಮಹೇಶ್, ಮಂಗಳ, ನಾರಾಯಣ, ದ್ವಿತೀಯ ದರ್ಜೆ ಸಹಾಯಕರಾದ ಕೆ ರಾಘವೇಂದ್ರ, ಮಂಜುನಾಥ್ ಎಂ ವಿ, ಡಿ ದರ್ಜೆ ನೌಕರರಾದ ಕಲ್ಪನಾ ಪಿ, ಮಂಜುನಾಥ್, ಶೋಭಾ ಎನ್, ಪ್ರವೀಣ್, ಮುನಿರಾಜು, ಮಂಜುಳಮ್ಮ ಮತ್ತು ಮೀನಾಕ್ಷಿ ಅವರುಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ಪ್ರದೇಶದ ಸರ್ಕಾರಿ ಜಮೀನುಗಳ ಮೂಲ ಮಂಜೂರಾತಿ ಕಡತಗಳು, ದರಖಾಸ್ತು ವಹಿ, ಸಾಗುವಳಿ ಚೀಟಿಗಳು, ಸಾಗುವಳಿ ಚೀಟಿ ವಿತರಣಾ ವಹಿ, ಮಂಜೂರಿ ನಡವಳಿ ವಹಿ, ಇನಾಂ ಡಿಸಿ ಆದೇಶದ ಕಡತಗಳು, ಭೂ ಸುಧಾರಣೆ ಮೂಲ ಕಡತಗಳು, ಐ.ಎಲ್. ಆರ್.ಆರ್, ಖೇತುವಾರು, ಸೂಡು ಪಹಣಿಗಳು, ಕೈಬರಹ ಪಹಣಿಗಳು ಹಾಗೂ ಇತರೆ ದಾಖಲೆಗಳಲ್ಲಿ ನಕಲಿ ದಾಖಲಾತಿಗಳನ್ನು ಸೇರಿಸಿ ಭೂಗಳ್ಳರಿಗೆ ಸರ್ಕಾರಿ ಜಮೀನನ್ನು ಕಬಳಿಸಲು ಸಹಕಾರ ಮಾಡಿರುವುದು ಭೂಸುರಕ್ಷಾ ಯೋಜನೆಯಡಿಯಲ್ಲಿ ದಾಖಲಾತಿಗಳನ್ನು ಸ್ಕ್ಯಾನ್ ಮಾಡುವ ಸಂದರ್ಭದಲ್ಲಿ ಕಂಡುಬಂದಿರುತ್ತದೆ ಆನೇಕಲ್ ಎಂದು ತಹಶೀಲ್ದಾರ್ ವರದಿ ಮಾಡಿದ್ದರು. ಈ ಕುರಿತು ಮರು ಪರಿಶೀಲಿಸಿದಾಗ ನಕಲಿ ದಾಖಲಾತಿಗಳೆಂದು ಮೇಲ್ನೋಟಕ್ಕೆ ಕಂಡುಬಂದಿದೆ, ಕಳೆದ 5 ವರ್ಷ ಹಿಂದಿನಿಂದ ಅಭಿಲೇಖಾಲಯದಲ್ಲಿ ಕೆಲಸ ನಿರ್ವಹಿಸಿದಂತಹ ಒಟ್ಟು 16 ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಮಾಹಿತಿ ನೀಡಿದ್ದಾರೆ.
ಈ ದಾಖಲಾತಿಗಳನ್ನು ಸೃಷ್ಟಿ ಮಾಡುವಲ್ಲಿ ಖಾಸಗಿ ವ್ಯಕ್ತಿಗಳು ಸಹಕಾರ ಮಾಡುತ್ತಿರುವ ಬಗ್ಗೆ ಹಾಗೂ ಈ ಪ್ರಕರಣದ ವ್ಯವಸ್ಥಿತ ಗುಂಪುಗಳ ಮೇಲೆಯೂ ಸಹ ವಿಚಾರಣೆ ಕೈಗೊಂಡು ಅವರ ಮೇಲೆಯೂ ಸಹ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆನೇಕಲ್ ತಹಶೀಲ್ದಾರ್ ರಿಗೆ ಸೂಚಿಸಲಾಗಿದೆ. ಅಲ್ಲದೇ, ಸರ್ಕಾರಿ ಜಮೀನುಗಳ ಬಗ್ಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ರೀತಿಯ ಆದೇಶಗಳನ್ನು, ಖಾತೆ ಮಾಡುವ ಸಮಯದಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಂಡು ಖಾತೆ ಮಾಡಲು ಜಿಲ್ಲೆಯ ಎಲ್ಲ ವಿಶೇಷ ತಹಶೀಲ್ದಾರ್ ರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ತಾಲ್ಲೂಕಿನಲ್ಲಿರುವ ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದಂತೆ ಖಾತೆ ಬದಲಾವಣೆ/ಮ್ಯೂಟೇಷನ್ಗಳಾಗಿರುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೂಡ ಆದೇಶಿಸಲಾಗಿದೆ ಎಂದಿದ್ದಾರೆ.
