ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ 82 ತಾಲೂಕು ಅಸ್ಪತ್ರೆಗಳಲ್ಲಿ ಟೆಲಿ ಕಾರ್ಡಿಯೋಲಾಜಿ ವ್ಯವಸ್ಥೆ ಮೂಲಕ ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದು, ದುಬಾರಿ ದರದ ಇಂಜೆಕ್ಷನ್ ಸಹ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ 600 ಜೀವಗಳನ್ನು ಒಂದುವರೆ ವರ್ಷದಲ್ಲಿ ಉಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ಭಾನುವಾರ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಟಾಟಾ ಸಭಾಂಗಣದಲ್ಲಿ ಟೆಲಿಮೆಡಿಸಿನ್ ಸೊಸೈಟಿ ಆಫ್ ಇಂಡಿಯಾ 21ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇವಲ 8/9 ನಿಮಿಷದಲ್ಲಿ ಪರಿಣಿತ ವೈದ್ಯರು ಇಸಿಜಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗೆ ಇದೇ ವರ್ಷ ಕಲ್ಪಿಸಲಾಗುತ್ತದೆ. ಇಲಾಖೆ ಆರೋಗ್ಯ ಉಪಕರಣಗಳ ನಿರ್ವಹಣೆ ಮಾಡಲು ತಂತ್ರಜ್ಞಾನ ಬಳಸಿಕೊಂಡು ಕೆಲಸ ಮಾಡುತ್ತಿದೆ ಎಂದರು.
ಇಂತಹ ಎಲ್ಲ ತಂತ್ರಜ್ಞಾನ ಬಳಸಿ ಹಳ್ಳಿಯಲ್ಲಿ ವಾಸಿಸುವವರಿಗೂ ಉತ್ತಮ ಚಿಕಿತ್ಸೆ ನೀಡಲು, ಪರಿಣಿತ ವೈದ್ಯರ ಸಲಹೆ ಸಿಗುವಂತೆ ಮಾಡಲು ಕಾರ್ಯೋನ್ಮುಖರಾಗಿದ್ದೇವೆ. ಇಲ್ಲಿರುವ ಪರಿಣಿತರು, ನಮ್ಮ ಆರೋಗ್ಯ ಇಲಾಖೆಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ. ನಿಮ್ಮ ಸಲಹೆ ಆರೋಗ್ಯ ಇಲಾಖೆಗೂ ಉಪಯೋಗ ಆಗಲಿ. ರಾಜ್ಯ ಮೆಡಿಕಲ್ ಫೆಸಿಲಿಟಿ, ಟೂರಿಸಂಗೆ ಮುಂಚೂಣಿಯಲ್ಲಿದ್ದು ಬೇರೆ ಬೇರೆ ದೇಶಗಳಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. ಎಐ ಮತ್ತು ಡಿಜಿಟಲ್ ತಂತ್ರಜ್ಞಾನ ಹೆಚ್ಚಿನ ಜನಸಂಖ್ಯೆ ಇರುವ ನಮ್ಮ ದೇಶಕ್ಕೆ ಬಹಳ ಉಪಯುಕ್ತ ಎಂದು ಹೇಳಿದರು.
ಇದು ಅತ್ಯಂತ ಆಸಕ್ತಿದಾಯಕ ವಿಷಯವಾಗಿದ್ದು, ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಯೋನ್ಮುಖವಾಗಿದೆ. ಅದಕ್ಕೆ ಬೇಕಾದ ಸಾಪ್ಟವೇರ್, ತಂತ್ರಜ್ಞಾನ ಲಭ್ಯವಿದ್ದು, ಅದನ್ನು ಸರಿಯಾಗಿ ಬಳಸಬೇಕಾಗಿದೆ. ಇದಕ್ಕೆ ಅತ್ಯುತ್ತಮ ದರ್ಜೆಯ ಕ್ಯಾಮರಾ ಬಳಸಲಾಗುತ್ತಿದ್ದು ದೂರದಲ್ಲಿದ್ದುಕೊಂಡೇ ತಜ್ಞ ವೈದ್ಯರು ಹಳ್ಳಿಯಲ್ಲಿರುವ ರೋಗಿಗೆ ಚಿಕಿತ್ಸೆ ನೀಡಲು ಸ್ಥಳೀಯ ವೈದ್ಯರಿಗೆ ನೆರವಾಗಬಹುದು. ಎಐ ತಂತ್ರಜ್ಞಾನ ಬಳಸಿ ಟೆಲಿ ರೆಡಿಯೋಲಾಜಿ, ಆಪ್ತಮಾಲೊಜಿ ಸೇವೆ ಮುಖಾಂತರ ರೋಗ ಪತ್ತೆ ಮಾಡುವ ನೂತನ ವ್ಯವಸ್ಥೆ ಜಾರಿಗೆ ತರಲು ಸಿದ್ದತೆ ನಡೆದಿದೆ ಎಂದು ಮಾಹಿತಿ ನೀಡಿದರು.
ಸಮ್ಮೇಳನದಲ್ಲಿ 700ಕ್ಕೂ ಹೆಚ್ಚು ದೇಶಿಯ ಮತ್ತು ಅಂತರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ಮಾಜಿ ನಿರ್ದೇಶಕ ಡಾ.ಗಂಗಾಧರ, ಇಸ್ರೊ ಮಾಜಿ ನಿರ್ದೇಶಕ ಡಾ.ಸತ್ಯಮೂರ್ತಿ, ಟಿಎಸ್‌ಐ ಅಧ್ಯಕ್ಷ ಡಾ.ಸುನಿಲ್ ಶ್ರಾಫ್, ಐಐಎಸ್‌ಸಿ ಮೆಡಿಕಲ್ ಸ್ಕೂಲ್ ಮುಖ್ಯಸ್ಥೆ ಡಾ.ಉಮಾ ನಂಬಿಯಾರ್, ಐಐಎಸ್‌ಸಿ ನಿರ್ದೇಶಕ ಡಾ.ಭಾಸ್ಕರ್ ರಾಜಕುಮಾರ್, ಪದಾಧಿಕಾರಿಗಳಾದ ಡಾ.ಉಮಾಶಂಕರ್, ಡಾ.ಸಂಜಯ್ ಶರ್ಮ, ಡಾ. ರಾಜೀವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
