News

ಇ-ಖಾತಾಗಳ ವಿಲೇವಾರಿ ತ್ವರಿತಗತಿಯಲ್ಲಿ ಮಾಡಿ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್

Share It

ಬೆಂಗಳೂರು: ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇ-ಖಾತಾಗೆ ಸ್ವೀಕೃತವಾಗಿರುವ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಇ-ಖಾತಾ ವಿತರಣೆ, ಬಿ-ಖಾತಾ ದಿಂದ ಎ-ಖಾತಾ ಪರಿವರ್ತನೆ ಹಾಗೂ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಸೋಮವಾರ ವರ್ಚ್ಯುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇ-ಖಾತಾ ದೂರುಗಳಿಗಾಗಿ ಪ್ರತ್ಯೇಕ ದೂರವಾಣಿ ಸಂಖ್ಯೆಯಾದ 9480683035 ಇದ್ದು, ಅದಕ್ಕೆ ಬರುವ ದೂರುಗಳನ್ನು ಕಾಲಮಿತಿಯೊಳಗಾಗಿ ಇತ್ಯರ್ಥಪಡಿಸಲು ಸೂಚಿಸಿದರು.

ಇ-ಖಾತಾ ಸಹಾಯವಾಣಿ ಸಂಖ್ಯೆಗೆ ಬರುವ ದೂರುಗಳನ್ನು ಪ್ರತ್ಯೇಕವಾಗಿ ಮೇಲ್ವಿಚಾರಣೆ ಮಾಡಬೇಕು. ತಿರಸ್ಕೃತವಾಗಿರುವ ಇ-ಖಾತಾ ಅರ್ಜಿಗಳನ್ನು ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂಬುದನ್ನು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನಗರದಲ್ಲಿ ಹೊಸ ಇ-ಖಾತಾಗಾಗಿ ಬಂದಿರುವ ಅರ್ಜಿಗಳು ಹಾಗೂ ಬಿ-ಖಾತಾ ದಿಂದ ಎ-ಖಾತಾ ಪರಿವರ್ತನೆಗೆ ಬಂದಿರುವಂತಹ ಅರ್ಜಿಗಳನ್ನು ಕೂಡಲೆ ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು. ಇದರಿಂದ ಪಾಲಿಕೆಗೆ ಆದಾಯ ಹೆಚ್ಚಾಗಲಿದೆ ಎಂದು ಹೇಳಿದರು.

ಸಭೆಯಲ್ಲಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮಾತನಾಡಿ, ಇ-ಖಾತಾಗೆ ಸಂಬಂಧಿಸಿದಂತೆ ದೂರವಾಣಿ ಸಂಖ್ಯೆಗೆ ಪ್ರತಿನಿತ್ಯ ಸುಮಾರು 1000 ಕರೆಗಳು ಬರುತ್ತಿದ್ದು, ಅವುಗಳನ್ನು ಟ್ರ್ಯಾಕ್ ಮಾಡಿ ಇರುವ ಸಮಸ್ಯೆ ಬಗೆಹರಿಸಿ ಆದ್ಯತೆಮೇರೆಗೆ ವಿಲೇವಾರಿ ಮಾಡುವ ಕೆಲಸ ಮಾಡಲಾಗುತ್ತಿದೆ. ಸರಿಯಾದ ಕಾರಣಗಳಿಲ್ಲದೆ ಇ-ಖಾತಾ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ. ಈ ಸಂಬಂಧ ಯಾವ ಕಾರಣಗಳಿಗಾಗಿ ತಿರಸ್ಕರಿಸಿದ್ದಾರೆ ಎಂಬುದನ್ನು ಪರಿಶೀಲಿಸಿ ಪಾಲಿಕೆವಾರು ಆ ಮಾಹಿತಿಯನ್ನು ನೀಡಲು ಕ್ರಮ ವಹಿಸಲಾಗುವುದು. ಅದರ ಅನುಸಾರ ಬಾಕಿಯಿರುವ ಇ-ಖಾತಾಗಳನ್ನು ತ್ವರಿತಗತಿಯಲ್ಲಿ ವಿಲೇವಾರಿಗೆ ಸಹಕಾರಿಯಾಗಲಿದೆ. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಯಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರನ್ನು ಪತ್ತೆ ಮಾಡಿ ವಾಣಿಜ್ಯ ಸ್ವತ್ತುಗಳಿಗೆ ಸೀಲ್ ಮಾಡಿ ಬಾಕಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಜೊತೆಗೆ ಪರಿಷ್ಕರಣೆ ಪ್ರಕರಣಗಳನ್ನು ಕೂಡಾ ಪರಿಶೀಲಿಸಿ ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಮಾತನಾಡಿ, ನಮ್ಮ ಪಾಲಿಕೆಯಲ್ಲಿ ಇ-ಖಾತಾಗಾಗಿ ಬಂದಂತಹ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಸರಿಯಾದ ಕಾರಣಗಳಿಲ್ಲದೆ ಅರ್ಜಿಗಳನ್ನು ತಿರಸ್ಕರಿಸಿದಂತಹ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಮಾಡಲಾಗಿದೆ ಎಂದು ಹೇಳಿದರು.

ಈ ವೇಳೆ ನಗರ ಪಾಲಿಕೆ ಆಯುಕ್ತರುಗಳಾದ ರಮೇಶ್ ಡಿ.ಎಸ್, ರಮೇಶ್ ಕೆ.ಎನ್, ಡಾ. ರಾಜೇಂದ್ರ ಕೆ.ವಿ, ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಕಂದಾಯ ವಿಭಾಗದ ಅಪರ ಆಯುಕ್ತರುಗಳು, ಜಂಟಿ ಆಯುಕ್ತರು ಸೇರಿದಂತೆ ಮತ್ತಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page