ಬೆಂಗಳೂರು: ಭಗವದ್ಗೀತೆ ಭಗವಂತನಿಂದ ಉಕ್ತವಾದ್ದಾಗಿದೆ. ಮಹಾಭಾರತದ ಅಂತಿಮ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಭಯ ಮತ್ತು ಗೋಜಲು ಕಾಡಿದಾಗ ಭಗವತ್ವವಾಣಿಯಂತೆ ಕೃಷ್ಣ ಕರ್ಮದ ಸಾರವನ್ನು ಬೋಧಿಸುತ್ತಾನೆ. ಅದು ಇಂದಿಗೂ ಪ್ರತಿಯೊಬ್ಬರ ದ್ವಂದ್ವಗಳಿಗೆ ಪರಿಹಾರವಾಗಿದೆ. ಇಂದಿಗೂ ಅತ್ಯುತ್ತಮ ಆಪ್ತ ಸಲಹೆಗಾರನಾಗಿ ಕೃಷ್ಣ ಕಂಡುಬರುತ್ತಿರುವುದು ಗೀತೆಯ ಉತ್ಕೃಷ್ಟತೆಯನ್ನು ಪ್ರಚುರಪಡಿಸುತ್ತದೆ ಎಂದು ಹೈಕೋರ್ಟ್ ನ್ಯಾಯಾಧೀಶ ಶ್ರೀಶಾನಂದ ಪ್ರತಿಪಾದಿಸಿದರು.
ಸೋಮವಾರ ಮಲ್ಲೇಶ್ವರದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬ್ರಾಹ್ಮಣ ಮಹಾಸಭಾ ಟ್ರಸ್ಟ್ ಆಯೋಜಿಸಿದ್ದ ಗೀತಾ ಜಯಂತೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಈಗಿನ ಕಾನೂನಿನಂತೆ ಅಪರಾಧ ಮಾಡುವವರು ಮಾತ್ರವಲ್ಲ ಅದನ್ನು ನೋಡಿಕೊಂಡು ಸುಮ್ಮನಿರುವುದು ಸಹ ಕೆಟ್ಟ ಕಾರ್ಯಕ್ಕೆ ಪ್ರಚೋದನೆ ನೀಡಿದಂತೆ ಎನ್ನುವುದು ಗೀತೆಯಲ್ಲಿ ಆಗಲೇ ಹೇಳಲಾಗಿದೆ. ಎಲ್ಲರಿಗೂ ಕಾಲಘಟ್ಟಗಳಿಗೆ ಅನುಗುಣವಾಗಿ ದುಃಖ ದ್ವಂದ್ವಗಳು ಬರುತ್ತವೆ ಆದರೆ ಈಗಿನ ಜನಾಂಗ ಖಿನ್ನತೆ ಎಂದು ಮಾತ್ರೆಗಳನ್ನು ತೆಗೆದುಕೊಳ್ಳುವುದು, ಆತ್ಮಹತ್ಯೆಗೆ ಮುಂದಾಗುವುದನ್ನು ನೋಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ವಿಪರೀತ ಕ್ರಮಗಳಿಗೆ ಮುಂದಾಗದೆ ಭಗವದ್ಗೀತೆ ಪಠಣವನ್ನು ಮಾಡಬೇಕು ಎಂದು ಕರೆ ನೀಡಿದರು.
ಅರ್ಜುನನ್ನು ನೆಪವಾಗಿಸಿಕೊಂಡು ಎಲ್ಲರಿಗೂ ದೇವವಾಣಿಯನ್ನು ತಲುಪಿಸುವ ಕೆಲಸವನ್ನು ಶ್ರೀಮನ್ನಾರಾಯಣ ಕೃಷ್ಣನ ರೂಪದಲ್ಲಿ ಮಾಡಿದ್ದಾನೆ. ಕೋವಿಡ್ ನಂತಹ ಸಮಯದಲ್ಲಿ ಗೀತೆಯನ್ನು ಓದಲು ಜನರು ಮಾಡಲಿಲ್ಲ ಎನ್ನುವುದು ದುಃಖಕರವಾಗಿದೆ. ಆದ್ದರಿಂದ ಗೀತೆಯನ್ನು ಓದದೇ ಇನ್ನಾದರೂ ಅದರ ಸಂದೇಶವನ್ನು ಅಳವಡಿಸಿಕೊಂಡು ಉತ್ತಮರಾಗುವತ್ತ ಸಾಗಬೇಕು. ಗೀತಾ ಜಯಂತಿಯನ್ನು ಎಲ್ಲಡೆ ಆಚರಿಸುವಂತಾಗಬೇಕು ಎಂದು ವೇದವ್ಯಾಸಾಚಾರ್ ಶ್ರೀಶಾನಂದ ಆಶಿಸಿದರು.
ಇವತ್ತಿನ ಕಾಲಘಟ್ಟದಲ್ಲಿ ಭಗವಾನ್ ಶ್ರೀಕೃಷ್ಣನ ಸಂದೇಶವಾದ ಭಗವದ್ಗೀತೆಯನ್ನು ಎಲ್ಲರಿಗೂ ತಲುಪಿಸುವ ಅನಿವಾರ್ಯತೆ ಇದೆ. ಜೀವನದ ನಿಜವಾದ ಸುಖವನ್ನು ಅನುಭವಿಸಲು ಮತ್ತು ಪರಿಪೂರ್ಣತೆಯನ್ನು ಪಡೆಯಲು ನಿತ್ಯ ನಿರತರ ಗೀತೆಯ ಅನುಷ್ಠಾನದ ವ್ಯವಸ್ಥೆ ಆಗಬೇಕು ಎಂದು ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಅಭಿಪ್ರಾಯಪಟ್ಟರು.
ಈ ಭೂಮಿಗೆ ನಾವು ಅಳುತ್ತಾ ಬಂದವರಾಗಿದ್ದು, ಶ್ರೀಕೃಷ್ಟ ಪರಮಾತ್ಮ ಮಾತ್ರ ನಗುತ್ತಾ ಅವತರಿಸಿದವನಾಗಿದ್ದಾನೆ. ಕರ್ಮದ ಫಲಗಳ ಬಗ್ಗೆ ತನ್ನ ಜೀವನವನ್ನೆ ನಿದರ್ಶನವಾಗಿ ತೋರಿದವನು ಅವನಾಗಿದ್ದಾನೆ. ಆದ್ದರಿಂದ ಅವನ ಭಗವದ್ಗೀತೆಯನ್ನು ಕಪಾಟಿನಲ್ಲಿ ಇರಿಸಿ ಧೂಳು ಹಿಡಿಯುವಂತೆ ನೋಡಿಕೊಳ್ಳದೆ ಅದರ ಸಾರವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಜಗತ್ತಿನ ಅತ್ಯಂತ ಸಮಗ್ರವಾದ ಗ್ರಂಥ ಭಗವದ್ಗೀತೆಯಾಗಿದೆ. ಕೃಷ್ಟ ಪರಮಾತ್ಮ ವಿವೇಕವನ್ನು ಉಪಯೋಗಿಸುವಂತೆ ಗೀತೆಯಲ್ಲಿ ಹೇಳಿದ್ದು ಇನ್ಯಾವುದೇ ಧರ್ಮ ಗ್ರಂಥದಲ್ಲಿ ಇದನ್ನು ಕಾಣಲು ಸಿಗುವುದಿಲ್ಲ. ಅಧರ್ಮ ಹೆಚ್ಚಾದಾಗ ಅವತರಿಸಿ ಧರ್ಮ ಸ್ಥಾಪಿಸಲು ಮತ್ತೆ ಬರುತ್ತೇನೆ. ಪ್ರತಿಯೊಂದು ಯುಗದಲ್ಲಿಯೂ ಹುಟ್ಟಿ ಬರುತ್ತೇನೆ ಎಂದಿರುವ ಯಾವ ಧರ್ಮದ ಮಹಾಪುರುಷರೂ ಹೇಳಿಲ್ಲ. ಬೇರೆ ಧರ್ಮದಲ್ಲಿ ಒಂದೇ ಅವತಾರ ಧರ್ಮಗ್ರಂಥ ಹೇಳುವುದೇ ಸತ್ಯ ಎಂದು ಹೇಳಲಾಗಿದ್ದು, ಅವುಗಳಲ್ಲಿ ವಿವೇಚನೆಯ ಅವಕಾಶ ಇಲ್ಲದಾಗಿದೆ ಎಂದು ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಕೆ. ವಿ ನರಸಿಂಹನ್ ಅಭಿಪ್ರಾಯಪಟ್ಟರು.
ಶೇಷಾದ್ರಿಪುರ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಡಾ ವುಡೇ ಪಿ ಕೃಷ್ಣ, ರಾಜಗುರು ಬಿ ಎಸ್ ದ್ವಾರಕಾನಾಥ್, ಮಲ್ಲೇಶ್ವರ ಬ್ರಾಹ್ಮಣ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಅದ್ವೈತ ವಾಚಸ್ಪತಿ ಪಾವಗಡ ಪ್ರಕಾಶ್ ರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
