ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಕರ್ತವ್ಯ ನಿರತ ಪೊಲೀಸರಿಗೆ ನಿಂದಿಸಿದ, ಬೆದರಿಸಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಇಬ್ಬರು ವ್ಯಕ್ತಿಗಳ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಕೇಸ್ ನ್ನು ಹೈಕೋರ್ಟ್ ರದ್ದುಪಡಿಸಿದೆ.
ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಇಬ್ಬರು ನಿವಾಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ನ್ಯಾಯಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರು ಪೊಲೀಸರ ಮೇಲೆ ಯಾವುದೇ ಬಲ ಪ್ರಯೋಗ ಅಥವಾ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿಲ್ಲ. ಸರ್ಕಾರಿ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಉದ್ದೇಶ ಪೂರ್ವಕ ಬಲಪ್ರಯೋಗ ಅಥವಾ ಹಲ್ಲೆ ನಡೆದಿರಬೇಕು. ಆದರೆ, ಅರ್ಜಿದಾರರ ವಿರುದ್ಧದ ಆರೋಪದಲ್ಲಿ ಇಂತಹ ಹುರುಳಿಲ್ಲ. ಅರ್ಜಿದಾರರು ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸುವಂತಹ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಚನ್ನಪಟ್ಟಣದಲ್ಲಿ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದು, ರಾತ್ರಿ 11.30ರ ನಂತರವೂ ಹೋಟೆಲ್ ತೆರೆದಿದ್ದರು ಎಂಬ ಕಾರಣಕ್ಕೆ ಪೊಲೀಸರು ಹಾಗೂ ಅರ್ಜಿದಾರರ ನಡುವೆ ವಾಗ್ವಾದ ನಡೆದಿತ್ತು. ಆ ಬಳಿಕ ಪೊಲೀಸರು ಅರ್ಜಿದಾರರ ವಿರುದ್ಧ ತಮ್ಮನ್ನು ಅಸಂಸದೀಯ ಪದಗಳಿಂದ ನಿಂದಿಸಿದ್ದಾರೆ. ಜೊತೆಗೆ, ತಮ್ಮನ್ನು ಎದುರು ಹಾಕಿಕೊಂಡರೆ ಭೀಕರ ಪರಿಣಾಮ ಎದರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಈ ಮೂಲಕ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ 2020 ರಲ್ಲಿ ಕೇಸ್ ದಾಖಲಿಸಿದ್ದರು.
ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353, 341, 506, 114 ಅಡಿ ದಾಖಲಿಸಿದ್ದ ಎಫ್ಐಆರ್ ಹಾಗೂ ಈ ಕುರಿತಂತೆ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ರದ್ದುಪಡಿಸಲು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೇಸ್ ರದ್ದುಪಡಿಸಿ ಆದೇಶಿಸಿದೆ.
(CRIMINAL PETITION No. 10483 OF 2022)
