News

ಚರ್ಚ್ ಗಳಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ: ಕರ್ನಾಟಕ ಕಥೋಲಿಕ್ ಕ್ರೈಸ್ತರ ಸಂಘದ ಅಧ್ಯಕ್ಷ ಐಸಾಕ್

Share It

ಬೆಂಗಳೂರು: ರಾಜ್ಯದಲ್ಲಿರುವ ಚರ್ಚ್ ಗಳಲ್ಲಿ ಕೊಂಕಣಿ ಗುಂಪುಗಳು ಅಧಿಕಾರವನ್ನು ಏಕಪಕ್ಷೀಯವಾಗಿ ಹಿಡಿದುಕೊಂಡು ಕನ್ನಡ ಕ್ರೈಸ್ತರನ್ನು ಕ್ರಮಬದ್ಧವಾಗಿ ಹತೋಟಿಗೆ ಒಳಪಡಿಸುತ್ತಿವೆ ಮತ್ತು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿವೆ ಎಂದು ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಸಂಘದ ಅಧ್ಯಕ್ಷ ಎ.ಐಸಾಕ್ ಆರೋಪ ಮಾಡಿದರು.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 14 ಧರ್ಮ ಕ್ಷೇತ್ರಗಳಿದ್ದರೂ, ಚಿಕ್ಕಮಗಳೂರುನಲ್ಲಿ ಹೊರತುಪಡಿಸಿ ಇತರೇ ಯಾವುದೇ ಚರ್ಚ್ ನಲ್ಲಿ ಒಬ್ಬರೂ ಕನ್ನಡಿಗ ಬಿಷಪ್ ಇಲ್ಲ. ಕರಾವಳಿ ಮೂಲದ ಬಲವಾದ ಮತದಾನ ಪ್ರಭಾವದಿಂದ ಕನ್ನಡಿಗ ಬಿಷಪ್‌ಗಳನ್ನು ಬೆಳಸದಂತೆ ತಡೆಯಲಾಗುತ್ತಿದೆ ಎಂದರು.

ಬೆಂಗಳೂರು ಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಪೀಟರ್ ಮಚಾಡೊ ಮತ್ತು ಮಾಜಿ ಮಹಾಧರ್ಮಾಧ್ಯಕ್ಷ ಬರ್ನಾರ್ಡ್ ಮೋರಾಸ್ ಇಬ್ಬರೂ ಕನ್ನಡ ಕ್ರೈಸ್ತರ ನ್ಯಾಯಬದ್ಧ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದಾರೆ. ಮುಖ್ಯ ಚರ್ಚ್ ಹುದ್ದೆಗಳು ಧರ್ಮಕ್ಷೇತ್ರ ಆಡಳಿತ, ಆಯೋಗಗಳು, ಸೆಮಿನರಿ ತರಬೇತಿ ಸಂಸ್ಥೆಗಳು, ಪ್ರಮುಖ ಸಂಸ್ಥೆಗಳು ಎಲ್ಲವೂ ಕರಾವಳಿ ಕೊಂಕಣಿ ವಲಯದ ಹಿಡಿತದಲ್ಲಿದ್ದು, ಕನ್ನಡ ಕ್ರೈಸ್ತರನ್ನು ತಮ್ಮದೇ ನೆಲದಲ್ಲಿ ಗೊಂಬೆಯ ಪ್ರೇಕ್ಷಕರನ್ನಾಗಿಸಿದೆ ಎಂದು ಐಸಾಕ್ ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಮಂಗಳೂರಿನ ರಾಯ್ ಕಾಸ್ಟೆಲಿನೊ ಅವರ ಸಾರ್ವಜನಿಕ ಹೇಳಿಕೆ ವಿವಾದ ಹೆಚ್ಚಿಸಿದ್ದು, ಅವರ ಹಸ್ತಕ್ಷೇಪ ಅನಧಿಕೃತ ಮತ್ತು ಕನ್ನಡ ಕ್ರೈಸ್ತರ ಭಾವನೆಗಳಿಗೆ ಅವಮಾನಕಾರಿಯಾಗಿದೆ. ಮಹಾಧರ್ಮಾಧ್ಯಕ್ಷರು ಈ ಕೂಡಲೇ 3/1983ರ ಸುತ್ತೋಲೆಯನ್ನು ರಾಜ್ಯದ ಎಲ್ಲೆಡೆ ಅನುಷ್ಠಾನಗೊಳಿಸಬೇಕು. ಕರಾವಳಿ ಏಕಾಧಿಕಾರಕ್ಕೆ ಅಂತ್ಯಹಾಡಿ, ತಮಿಳುನಾಡು, ತೆಲಂಗಾಣ ರಾಜ್ಯದ ಚರ್ಚ್ ಗಳಲ್ಲಿ ಸ್ಥಳೀಯ ಬಿಷಪ್‌ಗಳಿಗೆ ಆಧ್ಯತೆ ನೀಡಿದಂತೆ, ರಾಜ್ಯದಲ್ಲಿಯೂ ಕನ್ನಡಿಗ ಪಾದ್ರಿಗಳಿಗೆ ಸೂಕ್ತ ಪ್ರತಿನಿಧಿತ್ವ ಮತ್ತು ಕನ್ನಡಕ್ಕೆ ಯೋಗ್ಯ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ರಾಜ್ಯದ ಎಲ್ಲ ಚರ್ಚುಗಳಲ್ಲಿಯೂ ಕನ್ನಡಕ್ಕೆ, ಆದ್ಯತೆ ನೀಡಿ ಕನ್ನಡದಲ್ಲಿಯೇ ಪೂಜೆಗಳಾಗಬೇಕು. ಆಧ್ಯಾತ್ಮಿಕವಾಗಿ ಮುನ್ನಡೆಸಲು ಇರುವಂತಹ ಧರ್ಮಾಧ್ಯಕ್ಷರುಗಳನ್ನು ಕನ್ನಡ ಯಾಜಕರ ಬಳಗದಿಂದಲೇ ಆಯ್ಕೆ ಮಾಡಬೇಕು. ನಮ್ಮ ನೆಲದಲ್ಲಿರುವ ಸಂತ ಪೇತ್ರರ ಗುರುಮಠ ಕರ್ನಾಟಕ ಪ್ರಾಂತೀಯ ಗುರುಮಠವಾಗಬೇಕು ಎಂದು ಐಸಾಕ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಿ ಅಂತೋಣಿ ರಾಜು, ಖಜಾಂಚಿ ವೈ ಜಾರ್ಜ್ ಕುಮಾರ್ , ಕನ್ನಡ ಹೋರಾಟಗಾರ ಚಂದ್ರಶೇಖರ್, ಚನ್ನೇಗೌಡ ಉಪಸ್ಥಿತರಿದ್ದರು.


Share It

You cannot copy content of this page