ಮುಸ್ಲಿಂ ಮಹಿಳೆಗೆ ಆಕೆಯ ಪತಿ ಮೂರು ಬಾರಿ ತಲಾಖ್ ಎಂದು ಹೇಳಿ ವಿಚ್ಚೇದನ ನೀಡುವುದನ್ನು ‘ಕ್ರಿಮಿನಲ್ ಅಪರಾಧ’ವಾಗಿ ಪರಿಗಣಿಸಿರುವ ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥಿಸಿಕೊಂಡಿದೆ.
2019ರಲ್ಲಿ ಜಾರಿಗೆ ತಂದಿರುವ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣೆ ಕಾಯ್ದೆಯ ಸೆಕ್ಷನ್ 4 ರಲ್ಲಿ ತ್ರಿವಳಿ ತಲಾಖ್ ಅನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಗಿದ್ದು, ಈ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಕಾಯ್ದೆಯು ಮುಸ್ಲಿಮರ ಹಕ್ಕುಗಳಿಗೆ ಧಕ್ಕೆಯಾಗಿದ್ದು, ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಕೋರಿ ಜಮೈತ್ ಉಲಾಮಾ ಐ ಹಿಂದ್ ಹಾಗೂ ಸಮಸ್ತ ಕೇರಳ ಜಮೈತುಲ್ ಉಲೇಮಾ ಸಂಘಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಈ ಅರ್ಜಿಗೆ ಸಂಬಂಧಿಸಿದಂತೆ ಪ್ರಮಾಣಪತ್ರದ ಮೂಲಕ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, 2019ರ ಕಾಯ್ದೆಯು ವಿವಾಹಿತ ಮುಸ್ಲಿಂ ಮಹಿಳೆಯರ ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖವಾಗಿದೆ. ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ಅನ್ನು ಅಸಂವಿಧಾನಿಕ ಎಂದು ಘೋಷಿಸಿ, ರದ್ದುಪಡಿಸಿದ ನಂತರವೂ ಮಹಿಳೆಯರು ತ್ರಿವಳಿ ತಲಾಖ್ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ತ್ರಿವಳಿ ತಲಾಖ್ ಸಂತ್ರಸ್ತರು ಪೊಲೀಸರನ್ನು ಸಂಪರ್ಕಿಸುವುದು ಬಿಟ್ಟರೆ ಅವರಿಗೆ ಬೇರೆ ಹಾದಿ ಇಲ್ಲ. ಇಂತಹ ಸಂತ್ರಸ್ತ ಮಹಿಳೆಯ ಪತಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲೂ ಯಾವುದೇ ನಿಯಮಗಳಿಲ್ಲ. ಇಂತವರ ವಿರುದ್ಧ ಕ್ರಮ ಜರುಗಿಸಲು ಪೊಲೀಸರೂ ಅಸಹಾಯಕರಾಗಿದ್ದರು. ವಿವಾಹಿತ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ಶೋಚನೀಯ ಸ್ಥಿತಿಯನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ಅಗತ್ಯವಿದೆ. ಹೀಗಾಗಿ ಮುಸ್ಲಿಂ ಮಹಿಳೆಯರ ವಿವಾಹದ ಹಕ್ಕುಗಳ ಸಂರಕ್ಷಣೆ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.
ಅಲ್ಲದೇ, ತ್ರಿವಳಿ ತಲಾಖ್ ಸಾಮಾಜಿಕವಾಗಿಯೂ ಮಾರಕ ವ್ಯವಸ್ಥೆಯಾಗಿದೆ. ಅದನ್ನು ನಿರ್ಮೂಲನೆ ಮಾಡುವುದು ಇಂದಿನ ಅಗತ್ಯ. ಜತೆಗೆ ಕಾಯ್ದೆಯು ಸಂತ್ರಸ್ತ ಮಹಿಳೆಯರಿಗೆ ಸಾಂವಿಧಾನಿಕ ಹಕ್ಕುಗಳನ್ನು ನೀಡಲು ಸಹಕಾರಿಯಾಗಿದೆ. ಮೂಲಭೂತ ಹಕ್ಕುಗಳ ತಾರತಮ್ಯ ನಿಲ್ಲಿಸಿ, ಸಬಲೀಕರಣದ ಹೆಜ್ಜೆ ಇಡಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಅರ್ಜಿದಾರರ ವಾದವೇನು: ತ್ರಿವಳಿ ತಲಾಖ್ ನೀಡುವುದನ್ನು ಕ್ರಿಮಿನಲ್ ಅಪರಾಧ ಎಂದು ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಿದೆ. ಇದು ಸಂವಿಧಾನಬಾಹಿರ ನಡೆ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಪದ್ಧತಿಯನ್ನು ಅಮಾನ್ಯಗೊಳಿಸಿರುವುದರಿಂದ ಅದನ್ನು ಕ್ರಿಮಿನಲ್ ಅಪರಾಧವೆಂದು ಕಾನೂನು ಮಾಡುವ ಅಗತ್ಯವಿಲ್ಲ ಅಮಾನ್ಯವಾಗಿರುವ ಪದ್ಧತಿ ಅಪರಾಧವಲ್ಲ. ಹೀಗಾಗಿ, ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019 ನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿದಾರರು ವಾದಿಸಿದ್ದಾರೆ.
ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019ರ ಸೆಕ್ಷನ್ 4 ಹೇಳುವುದೇನು: 4. Punishment for pronouncing talaq.—Any Muslim husband who pronounces talaq referred to in section 3 upon his wife shall be punished with imprisonment for a term which may extend to three years, and shall also be liable to fine.
