ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ಪೊಲೀಸರು ಜಪ್ತಿ ಮಾಡಿರುವ 82 ಲಕ್ಷ ರೂ. ಹಣದ ಸಂಬಂಧ ಆರೋಪಿ ನಟ ದರ್ಶನ್ ಅವರನ್ನು ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯವು ಈ ಹಣದ ಮೂಲದ ಬಗ್ಗೆ ತನಿಖೆ ನಡೆಸಲು ಸೂಚಿಸಿತ್ತು. ಹಾಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರನ್ನು ವಿಚಾರಣೆ ನಡೆಸಿ ಹಣದ ಬಗ್ಗೆ ಮಾಹಿತಿ ಕೇಳಲು ಅಧಿಕಾರಿಗಳು ಕೋರ್ಟ್ ಅರ್ಜಿ ಸಲ್ಲಿಸಿ, ಅನುಮತಿ ಕೋರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಕೃಷಿ ಮತ್ತು ಪಶುಸಂಗೋಪನೆಯಿಂದ 25 ಲಕ್ಷ ರೂ. ತಮ್ಮ ಅಭಿಮಾನಿಗಳು ಹಾಗೂ ಆಪ್ತರಿಂದ 15 ಲಕ್ಷ ರೂ. ಉಡುಗೊರೆಯಾಗಿ ಬಂದಿದೆ. ಆದರೆ ಉಳಿದ ಹಣಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇಲ್ಲ ಎಂದು ದರ್ಶನ್ ತಿಳಿಸಿದ್ದರು. ಇನ್ನು ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಷ್ ಮನೆಯಲ್ಲಿ ಜಪ್ತಿ ಮಾಡಿರುವ 30ಲಕ್ಷ ರೂ. ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಣದ ಮೂಲ ಒದಗಿಸುವಂತೆ ಕೇಳಿದ್ದಾರೆ. ದರ್ಶನ್ ಅವರು ಪ್ರದೋಷ್ ಮನೆಯಲ್ಲಿ ಸಿಕ್ಕ ಹಣ ನನ್ನದಲ್ಲ, ಕುಟುಂಬಕ್ಕೂ ಸೇರಿದ್ದಲ್ಲ ಎಂದು ಹೇಳಿದ್ದರು. ಹಾಗಾಗಿ ಎರಡನೇ ಬಾರಿ ವಿಚಾರಣೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
