News

500 ಕೋಟಿ ಕೊಟ್ಟರೆ ಸಿಎಂ ಹುದ್ದೆ ಹೇಳಿಕೆ: ಮೆಂಟಲ್ ಆಸ್ಪತ್ರೆಗೆ ದಾಖಲಾಗಲು ಡಿಕೆಶಿ ಸಲಹೆ

Share It

‘ಮುಖ್ಯಮಂತ್ರಿ ಹುದ್ದೆಗೆ 500 ಕೋಟಿ ರೂ. ನೀಡಬೇಕು’ ಎಂಬ ಕಾಂಗ್ರೆಸ್ ನಾಯಕಿ ನವಜೋತ್ ಕೌರ್ ಸಿಧು ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಶನಿವಾರ, ‘500 ಕೋಟಿ ರೂ. ಸೂಟ್‌ಕೇಸ್ ನೀಡುವವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಈ ಬಗ್ಗೆ ಬಿಜೆಪಿ ಮತ್ತು ಎಎಪಿಯಿಂದ ತೀವ್ರ ಟೀಕೆ ವ್ಯಕ್ತಪಡಿಸಿತ್ತು.

ಇದೀಗ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್, ‘ಅವರು ಆಸ್ಪತ್ರೆಗೆ ದಾಖಲಾಗಲಿ, ಯಾವುದಾದರೂ ಒಳ್ಳೆಯ ಮಾನಸಿಕ ಆಸ್ಪತ್ರೆಗೆ ಸೇರಿಕೊಳ್ಳಲಿ’ ಎಂದು ಹೇಳಿದರು.

2027ರ ಚುನಾವಣೆಗೆ ಮುಂಚಿತವಾಗಿ, ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ನವಜೋತ್ ಸಿಂಗ್ ಸಿಧು ಸಕ್ರಿಯ ರಾಜಕೀಯಕ್ಕೆ ಮರಳುತ್ತಾರೆ. ಯಾವುದೇ ಪಕ್ಷಕ್ಕೆ ದಾನ ಮಾಡಲು ಅವರ ಬಳಿ ಹಣವಿಲ್ಲ. ಆದರೆ, ಪಂಜಾಬ್ ಅನ್ನು ‘ಸುವರ್ಣ ರಾಜ್ಯ’ವನ್ನಾಗಿ ಪರಿವರ್ತಿಸಬಹುದು. ನಾವು ಯಾವಾಗಲೂ ಪಂಜಾಬ್ ಗಾಗಿ ಮಾತನಾಡುತ್ತೇವೆ. ಆದರೆ, ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ನೀಡಬಹುದಾದ 500 ಕೋಟಿ ರೂ. ನಮ್ಮ ಬಳಿ ಇಲ್ಲ’ ಎಂದು ನವಜೋತ್ ಕೌರ್ ಸಿಧು ಹೇಳಿದ್ದರು.

ಯಾರಾದರೂ ಅವರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಯೇ ಎಂದು ಕೇಳಿದಾಗ, ಯಾರೂ ಅದನ್ನು ಬೇಡಿಕೆ ಇಟ್ಟಿಲ್ಲ, ಆದರೆ 500 ಕೋಟಿ ರೂ. ಸೂಟ್‌ಕೇಸ್ ನೀಡುವವರು ಮುಖ್ಯಮಂತ್ರಿಯಾಗಬಹುದು ಎಂದು ಅವರು ಹೇಳಿದ್ದರು.


Share It

You cannot copy content of this page