News

ಗಂಡನ ವಿರುದ್ಧ ಸುಳ್ಳು ಆರೋಪ ಮಾಡುವುದು ಕ್ರೌರ್ಯ: ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್.

ಪತಿಯ ವಿರುದ್ಧ ಸಾರ್ವಜನಿಕವಾಗಿ ಸುಳ್ಳು ಆರೋಪಗಳನ್ನು ಮಾಡುವುದು, ಸ್ತ್ರೀಲೋಲ ಎಂದು ಪಟ್ಟ ಕಟ್ಟುವುದು ಕ್ರೌರ್ಯದ ಪರಮಾವಧಿ ಎಂದು ಅಭಿಪ್ರಾಯಪಟ್ಟಿರುವ ದೆಹಲಿ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ಎತ್ತಿ ಹಿಡಿದಿದೆ.

ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಮದುವೆ ಎಂಬುದು ಗೌರವ, ನಂಬಿಕೆ, ವಿಶ್ವಾಸದ ತಳಹದಿಯ ಮೇಲೆ ನಿರ್ಮಿತವಾಗಿದೆ. ಪತಿಯಾಗಲಿ ಪತ್ನಿಯಾಗಲಿ ಪರಸ್ಪರ ದೂಷಣೆ ಮಾಡುತ್ತಾ ಗೌರವದಿಂದ ವರ್ತಿಸುವುದು ಅಕ್ಷಮ್ಯ ಅಪರಾಧ ಎಂದು ಹೇಳಿದೆ.

ಅಲ್ಲದೆ ಸುಳ್ಳಿನ ಸೌಧದ ಮೇಲೆ ಸಂಬಂಧಗಳನ್ನು ಉಳಿಸಿಕೊಳ್ಳಲಾಗದು, ಸಂಗಾತಿಯ ಬಗ್ಗೆ ಆಧಾರ ರಹಿತ ಆರೋಪ ಮಾನಹಾನಿಕರ ಹೇಳಿಕೆ ನೀಡುವ ಮೂಲಕ ವ್ಯಕ್ತಿತ್ವಕ್ಕೆ ಕಳಂಕ ಉಂಟು ಮಾಡುವುದು ಹಿಂದೂ ವಿವಾಹ ಕಾಯ್ದೆಯ ಅಡಿ ವಿಚ್ಛೇದನಕ್ಕೆ ಕಾರಣವಾಗುವ ಕ್ರೌರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ವಿಚ್ಛೇದನ ರದ್ದು ಕೋರಿದ ಪತ್ನಿಯ ಮನವಿಯನ್ನು ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ, ಪತಿಯ ಮೇಲೆ ವರದಕ್ಷಿಣೆ ಬೇಡಿಕೆಯ ಆರೋಪ ಹೊರಿಸುವುದು, ವಿವಾಹೇತರ ಸಂಬಂಧದ ಆರೋಪ ಮಾಡುವುದು, ಸ್ತ್ರೀಲೋಲ ಎಂದು ಪ್ರಚುರಪಡಿಸುವುದು, ನಪುಂಸಕತ್ವ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸುವುದು ಪತಿಯನ್ನು ಮಾನಸಿಕ ಯಾತನೆ ಮತ್ತು ಆಘಾತಕ್ಕೆ ದೂಡುತ್ತದೆ ಎಂದಿದೆ.

ದುರದೃಷ್ಟವಶಾತ್ ಪತ್ನಿ ತನ್ನ ಪತಿಯ ಕಚೇರಿಯ ಸಿಬ್ಬಂದಿ ಮುಂದೆಯೇ ದಾಂಪತ್ಯ ದ್ರೋಹದ ಆರೋಪಗಳನ್ನು ಮಾಡಿದ್ದಾರೆ. ಪತಿಯು ಸ್ತ್ರೀಲೋಲನಾಗಿದ್ದು, ಇಂಗ್ಲಿಷ್ ಮಾತನಾಡಬಲ್ಲ ಯಾವುದೇ ಮಹಿಳೆ ಹಿಂದೇ ಬೀಳುತ್ತಾನೆ ಎಂದು ಆರೋಪಿಸಿದ್ದಾರೆ. ಪತ್ನಿಯು ಸಾರ್ವಜನಿಕವಾಗಿ ಪತಿಗೆ ಕಿರುಕುಳ ನೀಡಿರುವ, ಅವಮಾನ ಮಾಡಿರುವ ಪ್ರಕರಣ ಇದಾಗಿದೆ.

ಪತಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಯ ಮಹಿಳಾ ಉದ್ಯೋಗಿಗಳಿಗೆ ಕೂಡ ಆಕೆ ಕಿರುಕುಳ ನೀಡಿದ್ದು, ಪತಿಯನ್ನು ಕಚೇರಿ ಸಿಬ್ಬಂದಿ ಮುಂದೆ ಸ್ತ್ರೀಲೋಲನಂತೆ ಚಿತ್ರಿಸಲು ಯತ್ನಿಸಿದ್ದಾರೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದ್ದು, ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಚೇದನ ಆದೇಶ ಸರಿಯಿದೆ ಎಂದು ಸ್ಪಷ್ಟಪಡಿಸಿದೆ.

MAT.APP.(F.C.)178/2016) & CM.APPL.9333/2017


Share It

You cannot copy content of this page