ಜೀನ್ಸ್ ಹಾಕಿಕೊಂಡು ಕೋರ್ಟ್ ಕಲಾಪದಲ್ಲಿ ಭಾಗವಹಿಸಲು ಬಂದಿದ್ದ ವಕೀಲರೊಬ್ಬರನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ನ್ಯಾಯಾಲಯದಿಂದ ಹೊರಗೆ ಕಳುಹಿಸಿದ್ದಾರೆ.
ಗುವಾಹಟಿ ಹೈಕೋರ್ಟ್ ನಲ್ಲಿ ಈ ಘಟನೆ ನಡೆದಿದ್ದು, ವಕೀಲ ಜೀನ್ಸ್ ಧರಿಸಿ ನ್ಯಾಯಾಲಯಕ್ಕೆ ಆಗಮಿಸಿದ್ದ ವಿಚಾರವನ್ನು ನ್ಯಾಯಾಲಯ ತನ್ನ ಆದೇಶದಲ್ಲಿಯೂ ದಾಖಲಿಸಿದೆ.
ಅಲ್ಲದೇ, ಘಟನೆ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ಹಾಗೂ ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದ ವಕೀಲರ ಪರಿಷತ್ತುಗಳ ಗಮನಕ್ಕೂ ತರುವಂತೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿದಾರರೊಬ್ಬರ ಪರ ವಾದ ಮಂಡಿಸಲು ವಕೀಲ ಬಿ.ಕೆ ಮಹಾಜನ್ ಎಂಬುವರು ಜೀನ್ಸ್ ಪ್ಯಾಂಟ್ ಧರಿಸಿ ಹೈಕೋರ್ಟ್ ಹಾಲ್ ಗೆ ಆಗಮಿಸಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿ ಕಲ್ಯಾಣ್ ರಾಯ್ ಸುರಾನ ನ್ಯಾಯಾಲಯದಿಂದ ಹೊರಹೋಗಲು ಸೂಚಿಸಿದ್ದಾರೆ.
ಅಲ್ಲದೇ, ಕೋರ್ಟ್ ನಲ್ಲಿದ್ದ ಪೊಲೀಸರನ್ನು ಕರೆಸಿ ಜೀನ್ಸ್ ಧರಿಸಿ ಬಂದಿದ್ದ ವಕೀಲರನ್ನು ನ್ಯಾಯಾಲಯದ ಆವರಣದಿಂದ ಹೊರಕ್ಕೆ ಕಳುಹಿಸುವಂತೆ ಸೂಚಿಸಿದ್ದಾರೆ. ಈ ಘಟನೆ ಕುರಿತು ದೈನಂದಿನ ಆದೇಶದಲ್ಲಿಯೂ ದಾಖಲಿಸಿರುವ ನ್ಯಾಯಮೂರ್ತಿ, ಸಿಜೆ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ವಕೀಲರ ಪರಿಷತ್ತುಗಳ ಗಮನಕ್ಕೆ ತರುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದ್ದಾರೆ.
ವಸ್ತ್ರ ಸಂಹಿತೆ: ವಕೀಲರ ಕಾಯ್ದೆ-1961 ರ ಸೆಕ್ಷನ್ 49 (ಜಿಜಿ) ವಕೀಲರಿಗೆ ವಸ್ತ್ರ ಸಂಹಿತೆ ನಿಗದಿಪಡಿಸುವ ಅಧಿಕಾರವನ್ನು ಭಾರತೀಯ ವಕೀಲರ ಪರಿಷತ್ತಿಗೆ ನೀಡಿದೆ. ಅದರಂತೆ ಬಿಸಿಐ ಸಮವಸ್ತ್ರ ಸಂಹಿತೆ ರೂಪಿಸಿದ್ದು ಆ ಪ್ರಕಾರ ನ್ಯಾಯಾಲಯಗಳ ವಿಚಾರಣೆಗೆ ಹಾಜರಾಗುವಾಗ ವಕೀಲರು ಕಪ್ಪು ಕೋಟು ಅಥವಾ ಕಪ್ಪನೆಯ ಉದ್ದನೆಯ ನಿಲುವಂಗಿ (ರೋಬ್), ಬಿಳಿಯ ಅಂಗಿ ಮತ್ತು ಕುತ್ತಿಗೆಪಟ್ಟಿ (ನೆಕ್ ಬ್ಯಾಂಡ್) ಇರುವ ನಿರ್ದಿಷ್ಟ ಸಮವಸ್ತ್ರ ಧರಿಸಬೇಕಿದೆ. ಅದೇ ರೀತಿ ಕಪ್ಪು, ಬಿಳಿ ಅಥವಾ ಬೂದು ಬಣ್ಣದ ಪ್ಯಾಂಟ್ ಧರಿಸಬಹುದಾಗಿದೆ.
