ಅಪ್ರಾಪ್ತ ಬಾಲಕಿಗೆ 50 ರೂಪಾಯಿ ಹಣ ನೀಡಿ ಲೈಂಗಿಕ ಸಂಪರ್ಕಕ್ಕೆ ಸಹಕರಿಸುವಂತೆ ಪುಸಲಾಯಿಸಲು ಪ್ರಯತ್ನಿಸಿದ್ದ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದೆ.
ಯತ್ಮಾವಲ್ ನಲ್ಲಿರುವ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ನ ನಾಗ್ಪುರ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಆರೋಪಿತನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವಿಲ್ಲ. ಬದಲಿಗೆ ಆತ ಬಾಲಕಿಯ ಕೈ ಹಿಡಿದಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ. ಇದು ಲೈಂಗಿಕ ದೌರ್ಜನ್ಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಆರೋಪಿತನ ಪರ ವಕೀಲರ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್ ಆರೋಪಿಗೆ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪೋಕ್ಸೊ ಕಾಯ್ದೆಯನ್ನು ಅಪ್ರಾಪ್ತರನ್ನು ಲೈಂಗಿಕ ಕಿರುಕುಳಗಳಿಂದ ರಕ್ಷಿಸಲು ರೂಪಿಸಲಾಗಿದೆ. ಬಾಲಕಿಯ ಹೇಳಿಕೆ ಪ್ರಕಾರ ಆರೋಪಿ ಲೈಂಗಿಕ ಸಂಬಂಧಕ್ಕೆ ಬೇಡಿಕೆ ಇಟ್ಟು ಆರೋಪಿ 50 ರೂಪಾಯಿ ನೀಡಿದ್ದಾನೆ. ಜತೆಗೆ ತನ್ನ ಆಫರ್ ಒಪ್ಪಿಕೊಳ್ಳುವಂತೆ ಕೈ ಹಿಡಿದು ಕೇಳಿದ್ದಾನೆ. ಇದು ಪೋಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹಿನ್ನೆಲೆ- ಪೋಷಕರು ಮನೆಯಲ್ಲಿ ಇಲ್ಲದ ಸಂದರ್ಭ ಖಚಿತಪಡಿಸಿಕೊಂಡ ಆರೋಪಿತ ವ್ಯಕ್ತಿ 13 ವರ್ಷದ ಸಂತ್ರಸ್ತ ಬಾಲಕಿ ಒಬ್ಬಳೇ ಮನೆಯಲ್ಲಿದ್ದಾಗ ತೆರಳಿ ಲೈಂಗಿಕತೆ ಪುಸಲಾಯಿಸಿದ್ದ. ಅದಕ್ಕಾಗಿ 50 ರೂಪಾಯಿ ಕೊಡುವುದಾಗಿ ಹೇಳಿದ್ದ. ಬಾಲಕಿಗೆ ಅರ್ಥವಾಗದೇ ಇದ್ದಾಗ ಕೈಹಿಡಿದು ಎಳೆದಿದ್ದ. ಅನುಚಿತ ವರ್ತನೆಯಿಂದ ಕಂಗಾಲಾದ ಬಾಲಕಿ ಕೂಗಿಕೊಂಡಾಗ ಓಡಿ ಹೋಗಿದ್ದ.
ಮರುದಿನವೂ ಆರೋಪಿತ ವ್ಯಕ್ತಿ ಪುನರಾವರ್ತನೆ ಮಾಡಿದ್ದ. ಆ ಬಳಿಕ ಬಾಲಕಿ ವಿಚಾರಾವನ್ನು ಪೋಷಕರ ಬಳಿ ಹೇಳಿಕೊಂಡಿದ್ದಳು. ಅದರಂತೆ ಪೋಷಕರು ಆರೋಪಿತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
(CRIMINAL APPEAL No. 772/2019)
