ಹಿಂದುಳಿದ ವರ್ಗಕ್ಕೆ ಸೇರಿದ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿ ದಾಟಿದ್ದರೆ ಅಭ್ಯರ್ಥಿ ಕೆನೆ ಪದರಕ್ಕೆ ಸೇರುತ್ತಾರೆ. ಅದರಂತೆ, ಹಿಂದುಳಿದ ವರ್ಗಗಳ ಅಡಿ ಅವರು ಮೀಸಲು ಪಡೆಯಲು ಅನರ್ಹರಾಗುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಾಘವೇಂದ್ರ ಚಂದ್ರಣ್ಣನವರ್ ಎಂಬುವರು ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಪ್ರವರ್ಗ 2ಎ ಅಡಿ ಆಯ್ಕೆಯಾಗಿದ್ದು, ಮೀಸಲಾತಿಗೆ ಅನ್ವಯಿಸುವ ಜಾತಿ ಸಿಂಧುತ್ವ ಪ್ರಮಾಣಪತ್ರ ವಿತರಿಸುವಂತೆ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ಏಕಸದಸ್ಯ ಪೀಠದ ಆದೇಶ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ರಾಘವೇಂದ್ರ ಅವರು ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸಲು ಕೋರಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಮೇಲ್ಮನವಿ ಹಾಗೂ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ, ಅಭ್ಯರ್ಥಿಯ ಪೋಷಕರ ವೇತನ ಸೇರಿ ಎಲ್ಲ ಮೂಲದ ಆದಾಯವನ್ನು ಪರಿಗಣಿಸಬೇಕು. ಒಂದು ವೇಳೆ ಆದಾಯವು ನಿಗದಿತ ಮಿತಿಯನ್ನು ದಾಟಿದರೆ, ಆದಾಯ ತೆರಿಗೆ ಪಾವತಿದಾರನಾದರೆ ಆಗ ಕೆನೆ ಪದರ ನಿಯಮ ಅನ್ವಯ ಆಗಲಿದೆ. ಆಗ ಅಭ್ಯರ್ಥಿಯು ಪ್ರವರ್ಗ 2ಎ ಅಡಿ ಮೀಸಲು ಪಡೆಯಲು ಅವಕಾಶವಿಲ್ಲ ಎಂದು ತೀರ್ಪು ನೀಡಿದೆ. ಹಾಗೆಯೇ, ಸರ್ಕಾರದ ಮೇಲ್ಮನವಿ ಮಾನ್ಯ ಮಾಡಿರುವ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶ ರದ್ದುಪಡಿಸಿದೆ. ಜತೆಗೆ ರಾಘವೇಂದ್ರ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಪ್ರಕರಣದ ಹಿನ್ನೆಲೆ: ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ರಾಘವೇಂದ್ರ ಫಕೀರಪ್ಪ ಚಂದ್ರಣ್ಣನವರ್ ಪ್ರವರ್ಗ- 2ಎ (ಕುರುಬ) ಅಡಿ ಆಯ್ಕೆಯಾಗಿದ್ದರು. ಅದರಂತೆ, ಮೀಸಲಾತಿ ಪತ್ರಕ್ಕಾಗಿ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನೆ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಭ್ಯರ್ಥಿಯ ಪೋಷಕರ ಆದಾಯವು ಪ್ರವರ್ಗ- 2ಎಗೆ ನಿಗದಿ ಪಡಿಸಿರುವ ವಾರ್ಷಿಕ ಆದಾಯ ಮಿತಿಯಾದ 8 ಲಕ್ಷ ರೂ. ಮೀರುತ್ತಿದ್ದರಿಂದ ಹಿಂದುಳಿದ ವರ್ಗಗಳ ಅಡಿ ಮೀಸಲಾತಿ ಪಡೆಯಲು ಅರ್ಹರಲ್ಲ ಎಂದಿದ್ದ ಸಮಿತಿ, 2024ರ ಮಾರ್ಚ್ 6ರಂದು ರಾಘವೇಂದ್ರ ಅರ್ಜಿ ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ರಾಘವೇಂದ್ರ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. 2024ರ ಅಕ್ಟೋಬರ್ 28ರಂದು ಅರ್ಜಿ ಮಾನ್ಯ ಮಾಡಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಎರಡು ವಾರಗಳಲ್ಲಿ ಜಾತಿ ಸಿಂಧುತ್ವ ಪ್ರಮಾಣಪತ್ರ ವಿತರಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ರಾಘವೇಂದ್ರ ಹೈಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಎಂದು ಆಕ್ಷೇಪಿಸಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
(WA No. 301 of 2025 C/W CCC No. 74 of 2025)
