ರೌಡಿ ಶೀಟ್ ನಲ್ಲಿ ಹೆಸರಿದೆ ಎಂಬ ಒಂದೇ ಕಾರಣಕ್ಕೆ ಪೊಲೀಸರು ರೌಡಿ ಶೀಟರ್ ಗಳನ್ನು ತಮಗಿಷ್ಟ ಬಂದಂತೆ ಠಾಣೆಗೆ ಕರೆತರಬಾರದು ಹಾಗೂ ಅವರನ್ನು ಅವಶ್ಯವಿರದಿದ್ದಾಗ ಹೆಚ್ಚಿನ ಸಮಯ ಠಾಣೆಯಲ್ಲಿ ಇರಿಸಬಾರದು ಎಂದಿರುವ ಹೈಕೋರ್ಟ್, ರೌಡಿ ಶೀಟರ್ ಗಳನ್ನು ಠಾಣೆಗೆ ಕರೆಸಲು ನಿಯಮ ಪಾಲಿಸುವಂತೆ ರಾಜ್ಯ ಪೊಲೀಸರಿಗೆ ಸೂಚಿಸಿದೆ.
ರೌಡಿ ಶೀಟರ್ ಗಳನ್ನು ಪೊಲೀಸರು ಠಾಣೆಗೆ ಕರೆತರುವ ವಿಚಾರವಾಗಿ ರೌಡಿ ಶೀಟರ್ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನಿಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ರೌಡಿಶೀಟರ್ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಪ್ರಕ್ರಿಯೆ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಇನ್ಮುಂದೆ ರೌಡಿಶೀಟರ್ಗಳನ್ನು ಪೊಲೀಸ್ ಠಾಣೆಗೆ ಕರೆಸುವ ಮುನ್ನ ಅವರಿಗೆ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಬೇಕು. ಅವರು ಬರದೇ ಇದ್ದಲ್ಲಿ ಮಾತ್ರ ಅವರಿರುವ ಜಾಗ ಅಥವಾ ಮನೆಗೆ ಹೋಗಿ ಕರೆತರಬಹುದು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೇ ಬೆಂಗಳೂರಿನಲ್ಲಿ 6,500 ಕ್ಕೂ ಹೆಚ್ಚು ರೌಡಿ ಶೀಟರ್ ಗಳಿದ್ದಾರೆ. ಅವರಿಗೂ ಘನತೆಯಿಂದ ಬದುಕುವ ಹಕ್ಕಿದೆ ಮತ್ತು ಅವರಿಗೆ ತಮ್ಮ ಇತಿಹಾಸ ಮರೆತು ಬದಲಾಗಲು ಅವಕಾಶ ಕಲ್ಪಿಸಿಕೊಡಬೇಕೆಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಇನ್ನು ರೌಡಿ ಶೀಟರ್ ಗಳು ತಮ್ಮ ದೂರವಾಣಿ ಸಂಖ್ಯೆಗಳನ್ನು ಪೊಲೀಸರಿಗೆ ನೀಡಿರಬೇಕು. ಜತೆಗೆ ಪೊಲೀಸರು ಅವಶ್ಯವಿದ್ದಾಗ ಮೊಬೈಲ್ ಎಸ್ಎಂಎಸ್ ಅಥವಾ ವಾಟ್ಸಾಪ್ ಮೂಲಕ ಸೂಚಿಸಿದಂತೆ ಅವರ ಮುಂದೆ ಹಾಜರಾಗಬೇಕು. ಒಂದೊಮ್ಮೆ ಹಾಜರಾಗದಿದ್ದರೆ ಪೊಲೀಸರು ರೌಡಿಶೀಟರ್ ಗಳ ಮನೆ ಬಳಿ ಹೋಗಲು ಅಡ್ಡಿಯಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹಾಗೆಯೇ, ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರಿಗೆ ಈ ಆದೇಶದ ರಕ್ಷಣೆ ಸಿಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅಲೋಕ್ ಕುಮಾರ್ ಹೆಚ್ಚುವರಿ ಆಯುಕ್ತರಾಗಿದ್ದಾಗ ರೌಡಿಶೀಟರ್ ಸುನೀಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲ್ ಕರೆಸಿ ಎಚ್ಚರಿಸಿದ್ದರು. ಅಲೋಕ್ ಕುಮಾರ್ ವಾರ್ನಿಂಗ್ ನೀಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಸೈಲೆಂಟ್ ಸುನೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುನೀಲ್ ಕುಮಾರ್ ರಿಟ್ ಅರ್ಜಿ ಸಂಬಂಧ ಆದೇಶ ಹೊರಡಿಸಲಾಗಿದೆ.
(WRIT PETITION NO. 18789 OF 2019 (GM-POLICE)
