ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿ ನಿರಂತರವಾಗಿ ಪತಿಗೆ ಬೆದರಿಕೆ ಹಾಕುವುದು ಕೂಡ ಕ್ರೌರ್ಯ ಎಂದು ಅಭಿಪ್ರಾಯಟ್ಟಿರುವ ಛತ್ತೀಸ್ ಗಢ ಹೈಕೋರ್ಟ್, ದಂಪತಿಗೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
2024 ರಲ್ಲಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದ್ದ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರಜನಿ ದುಬೆ ಹಾಗೂ ಅಮಿತೇಂದ್ರ ಕಿಶೋರ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ತೀರ್ಪಿನಲ್ಲಿ ಪತ್ನಿ ಪದೆಪದೇ ಪತಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೇ, ಸೀಮೆ ಎಣ್ಣ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾಳೆ. ಒಮ್ಮೆ ಚಾಕುವಿನಿಂದ ಇರಿದುಕೊಳ್ಳಲು ಮುಂದಾಗಿದ್ದಾಳೆ. ಮತ್ತೊಮ್ಮೆ ವಿಷ ಕುಡಿಯುವ ಪ್ರಯತ್ನ ಮಾಡಿದ್ದಾಳೆ ಎಂದು ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದರಿಂದ ಕಾಣುತ್ತದೆ. ಅಲ್ಲದೇ ಪತಿಯು ಧರ್ಮ ಬದಲಿಸುವಂತೆ ಒತ್ತಾಯ ಮಾಡಿರುವ ಆರೋಪವಿದೆ.
ಹೀಗೆ ಪತಿಯನ್ನು ಧರ್ಮ ಬದಲಿಸುವಂತೆ ಒತ್ತಾಯಿಸುವುದು ಹಾಗೂ ಪದೆಪದೇ ಆತ್ಮಹತ್ಯೆಗೆ ಯತ್ನಿಸುವುದು ಹಾಗೂ ತನಗೇ ಹಾನಿ ಮಾಡಿಕೊಂಡು ಮತ್ತೊಬ್ಬರನ್ನು ಹೆದರಿಸಲು ಪ್ರಯತ್ನಿಸುವುದು ಮಾನಸಿಕ ಕ್ರೌರ್ಯವಲ್ಲದೆ ಮತ್ತೇನಲ್ಲ. ಹೀಗಾಗಿ ಪತಿಗೆ ವಿಚ್ಛೇದನ ನೀಡಿರುವ ಕೌಟುಂಬಿಕ ನ್ಯಾಯಾಲಯದ ತೀರ್ಪು ಸರಿಯಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ವಿಚ್ಛೇದನ ಆಕ್ಷೇಪಿಸಿದ್ದ ಪತ್ನಿಯ ಅರ್ಜಿಯನ್ನು ವಜಾಗೊಳಿಸಿದೆ.
ದಂಪತಿ 2018 ರಲ್ಲಿ ವಿವಾಹವಾಗಿದ್ದು ಇಬ್ಬರ ನಡುವೆ ಕಲಹ ಏರ್ಪಟ್ಟಿತ್ತು. ಇದರ ನಡುವೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದ ಪತಿ, ತನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರಂತರವಾಗಿ ಬೆದರಿಕೆ ಹಾಕಿದ್ದಾಳೆ ಮತ್ತು ಅಂತಹ ಪ್ರಯತ್ನಗಳನ್ನು ಮಾಡಿದ್ದಾಳೆ. ಹಾಗಾಗಿ ತನಗೆ ಆಕೆಯಿಂದ ವಿಚ್ಛೇದನ ಕೊಡಿಸಬೇಕು ಎಂದು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಪತಿಯ ಕೋರಿಕೆಯಂತೆ ದಂಪತಿಗೆ ವಿಚ್ಛೇದನ ನೀಡಿ ಆದೇಶಿಸಿತ್ತು. ಇದನ್ನು ಪತ್ನಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.
