ಪತ್ನಿ ಡಾ.ಕೃತಿಕಾ ರೆಡ್ಡಿಗೆ ಅನಸ್ತೇಶಿಯಾ ನೀಡಿ ಕೊಂದ ಆರೋಪ ಎದುರಿಸುತ್ತಿರುವ ಪತಿ ಡಾ. ಜಿ ಎಸ್ ಮಹೇಂದ್ರ ರೆಡ್ಡಿ ಅವರಿಗೆ ಜಾಮೀನು ನೀಡಲು ಬೆಂಗಳೂರಿನ ನ್ಯಾಯಾಲಯ ನಿರಾಕರಿಸಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ವೈದ್ಯ ಜಿ ಎಸ್ ಮಹೇಂದ್ರ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಈ ಆದೇಶ ನೀಡಿದೆ.
ಅರ್ಜಿ ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿ, “ಆರೋಪಿ ಒಬ್ಬ ವೃತ್ತಿನಿರತ ವೈದ್ಯರು. ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಕೃತ್ಯ ಎಸಗಿರುವ ಅವರಿಗೆ ಒಂದು ವೇಳೆ ಜಾಮೀನು ಮಂಜೂರು ಮಾಡಿದರೆ ತನಿಖೆಯ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ಆದ್ದರಿಂದ, ಜಾಮೀನು ಮಂಜೂರು ಮಾಡಬಾರದು” ಎಂದು ಮನವಿ ಮಾಡಿದರು. ವಾದ ಪುರಸ್ಕರಿಸಿದ ಕೋರ್ಟ್ ಜಾಮೀನು ನೀಡಲು ನಿರಾಕರಿಸಿ ಅರ್ಜಿ ವಜಾಗೊಳಿಸಿದೆ.
ಹಿನ್ನೆಲೆ: ಡಾ.ಕೃತಿಕಾ ರೆಡ್ಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರಾಗಿದ್ದರು. ಪತಿ ಮಹೇಂದ್ರ ರೆಡ್ಡಿ ಇದೇ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿದ್ದು, 2024ರ ಮೇ 24ರಂದು ವಿವಾಹವಾಗಿದ್ದರು. ಪತ್ನಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ನೀಡಿದ್ದ ಮಹೇಂದ್ರ ರೆಡ್ಡಿ ಕೃತಿಕಾಗೆ ಅನಸ್ತೇಶಿಯಾ ನೀಡಿದ್ದರು. ಮೃತ ಕೃತಿಕಾರ ಪೋಷಕರು ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದಿದ್ದರಿಂದ ಯುಡಿಆರ್ (ಅಸ್ವಾಭಾವಿಕ ಸಾವು) ದಾಖಲಾಗಿತ್ತು.
ಆದರೆ, ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಬಂದ ನಂತರ ಅನಸ್ತೇಶಿಯಾದ ಪ್ರಮಾಣ ಹೆಚ್ಚಾದ ಕಾರಣ ಸಾವು ಸಂಭವಿಸಿದೆ ಎಂಬುದು ತಿಳಿದು ಬಂದಿತ್ತು. ಈ ಸಂಬಂಧ ಕೃತಿಕಾ ತಂದೆ ಕೆ ಮುನಿರೆಡ್ಡಿ ನೀಡಿದ ದೂರಿನ ಮೇರೆಗೆ ಪೊಲೀಸರು ವೈದ್ಯ ಮಹೇಂದ್ರ ರೆಡ್ಡಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
