ಹೆಂಡತಿ ಮಕ್ಕಳಿಗೆ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶ ರದ್ದು ಕೋರಿ ಬಿಟಿಎಂ ಲೇಔಟ್ ನಿವಾಸಿ ಮೊಹಮ್ಮದ್ ಪಾಷಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಪವಿತ್ರ ಕುರಾನ್‌ನಲ್ಲಿ ಹೇಳಿರುವಂತೆ ಪತ್ನಿ ಹಾಗೂ ಮಕ್ಕಳನ್ನು ಪೋಷಿಸುವುದು ಪತಿಯ ಆದ್ಯ ಕರ್ತವ್ಯ. ಇಬ್ಬರು ಮಕ್ಕಳಲ್ಲಿ ಒಂದು ವಿಶೇಷ ಚೇತನ ಮಗುವಾಗಿದ್ದರೆ, ಮತ್ತೊಂದು ಮಗು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದೆ. ಹೀಗಾಗಿ, ಪತ್ನಿ ಮತ್ತು ಮಕ್ಕಳಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿಯನ್ನು ಜೀವನಾಂಶವಾಗಿ ನೀಡಲೇಬೇಕು ಎಂದು ಅರ್ಜಿದಾರ ಪತಿಗೆ ಆದೇಶಿಸಿದೆ.
ಇದೇ ವೇಳೆ ಮಾಸಿಕ 25 ಸಾವಿರದಷ್ಟು ಜೀವನಾಂಶ ಮೊತ್ತ ಪಾವತಿಸಲು ತನಗೆ ಕಷ್ಟವಾಗಲಿದೆ, ಆದ್ದರಿಂದ ಮೊತ್ತ ಕಡಿಮೆ ಮಾಡಬೇಕು ಎಂದು ಪತಿ ಮಂಡಿಸಿದ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಈಗಿನ ಕಾಲದಲ್ಲಿ ಎಲ್ಲವೂ ದುಬಾರಿಯಾಗಿದೆ. ಪತ್ನಿಗೆ ಆದಾಯದ ಮೂಲಗಳಿವೆ ಎಂಬುದನ್ನು ಪತಿ ಸಾಬೀತು ಮಾಡಿಲ್ಲ. ಹೀಗಾಗಿ ಅರ್ಜಿದಾರರು ಮಕ್ಕಳು ಹಾಗೂ ಹೆಂಡತಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶದಂತೆ ಜೀವನಾಂಶ ಪಾವತಿಸಬೇಕು ಎಂದು ಆದೇಶಿಸಿದೆ.
