ಒಪ್ಪಿತ ಲೈಂಗಿಕ ಸಂಬಂಧದ ವಯೋಮಿತಿಯನ್ನು 18 ರಿಂದ 16ಕ್ಕೆ ಇಳಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಯೋಚಿಸಿ ಅಗತ್ಯ ನಿರ್ಧಾರ ಕೈಗೊಳ್ಳಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್ ಮನವಿ ಮಾಡಿದೆ.
ಅಪ್ರಾಪ್ತೆಯೊಂದಿಗಿನ ಲೈಂಗಿಕ ಸಂಬಂಧ ಆರೋಪಡಿ ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಕೇಸ್ ರದ್ದುಪಡಿಸುವಂತೆ ಕೋರಿ 23 ವರ್ಷದ ರಾಹುಲ್ ಚಂದೇಲ್ ಎಂಬ ಯುವಕ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸುವ ವೇಳೆ ನ್ಯಾ. ದೀಪಕ್ ಕುಮಾರ್ ಅಗರ್ವಾಲ್ ಈ ಮನವಿ ಮಾಡಿದ್ದಾರೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಇಂದಿನ ಮಕ್ಕಳು 14 ವಯಸ್ಸಿಗೆಲ್ಲಾ ಪ್ರೌಢಾವಸ್ಥೆ ತಲುಪುತ್ತಾರೆ. ಹದಿಹರೆಯಕ್ಕೆ ಕಾಲಿಡುತ್ತಲೇ ಸಾಮಾಜಿಕ ಜಾಲತಾಣಗಳನ್ನು ಬಳಸಲು ಶುರು ಮಾಡುತ್ತಾರೆ. ಸ್ನೇಹದಿಂದ ಆರಂಭವಾಗುವ ಇವರ ಸಂಬಂಧ ಆಕರ್ಷಣೆಯೊಂದಿಗೆ ಒಪ್ಪಿತ ದೈಹಿಕ ಸಂಬಂಧವಾಗಿ ಮುಂದುವರೆಯುತ್ತದೆ. ಇಂತಹ ಸಂದರ್ಭಗಳಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿಲ್ಲದಿದ್ದರೂ ಹುಡುಗರನ್ನು ಸಮಾಜದಲ್ಲಿ ಕ್ರಿಮಿನಲ್ ಗಳಾಗಿ ನೋಡಲಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಯೋಮಿತಿ ಪರಿಷ್ಕರಿಸಿಸಲು ಮುಂದಾಗಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಆರೋಪಿತ ರಾಹುಲ್ ಚಂದೇಲ್ ಜಾಟವ್ ಗೆ ದುಷ್ಕೃತ್ಯ ಎಸಗುವ ಉದ್ದೇಶ ಹೊಂದಿರಲಿಲ್ಲ ಎಂದು ಅಭಿಪ್ರಾಯಪಟ್ಟು ಆತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376(2)(F)(n), 376(3), 315, ಪೋಕ್ಸೋ ಕಾಯ್ದೆಯ ಸೆಕ್ಷನ್ 5(L)(O), 6 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 ಅಡಿ ದಾಖಲಿಸಿದ್ದ ಎಫ್ಐಆರ್ ನ್ನು ರದ್ದುಪಡಿಸಿದೆ.
(MISC. CRIMINAL CASE No. 24691 of 2023)
ಇಂತಹುದೇ ತೀರ್ಪೊಂದನ್ನು ಮೇಘಾಲಯ ಹೈಕೋರ್ಟ್ ಇತ್ತೀಚೆಗೆ ನೀಡಿತ್ತು. 16 ವರ್ಷದ ಯುವತಿ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಳ್ಳಲು ಸಮರ್ಥಳು ಎಂದು ಅಭಿಪ್ರಾಯಪಟ್ಟು ವ್ಯಕ್ತಿಯೊಬ್ಬರ ವಿರುದ್ಧ ಪೊಕ್ಸೋ ಕಾಯ್ದೆ ಅಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿತ್ತು.
