Law

ಕಿರುಕುಳದಿಂದ ಮಹಿಳೆ ಸಾವು: ಗಂಡ, ಅತ್ತೆ, ನಾದಿನಿಗೆ ಶಿಕ್ಷೆ

Share It

ಹೆಣ್ಣು ಮಕ್ಕಳು ಹುಟ್ಟಿದವೆಂಬ ಕಾರಣಕ್ಕೆ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದ ಪತಿ, ಆತನ ತಾಯಿ ಮತ್ತು ಸೋದರಿಗೆ ಹೈಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆ ಮಾಡಿದ ಮಂಡ್ಯ ಜಿಲ್ಲಾ ನ್ಯಾಯಾಲಯದ ಆದೇಶ ರದ್ದುಗೊಳಿಸುವಂತೆ ಹಾಗೂ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಕೋರಿ ಮಳವಳ್ಳಿ ತಾಲೂಕಿನ ಕಿರುಗಾವಲು ಠಾಣೆ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಮೃತ ಹೇಮಲತಾ ಸಾವಿಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಗಳು ಇಲ್ಲದಿರಬಹುದು. ಆದರೆ ಕಿರುಕುಳ ನೀಡಿರುವುದು ಸ್ಪಷ್ಟ. ಹೆಣ್ಣು ಮಕ್ಕಳಿಗೆ ಜನ್ಮ ನೀಡಿರೆಂಬ ಕಾರಣಕ್ಕೆ ಪತಿ, ಅತ್ತೆ ಹಾಗೂ ನಾದಿನಿ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂಬುದು ಪ್ರಾಸಿಕ್ಯೂಷನ್‌ ಸಾಕ್ಷ್ಯಗಳಿಂದ ರುಜುವಾತಾಗಿದೆ. ಪತ್ನಿಯನ್ನು ರಕ್ಷಿಸಬೇಕಾದ ಪತಿ ಮಾದೇಶ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಕಿರುಕುಳ ನೀಡಿದ ಅಪರಾಧಕ್ಕೆ ಆರೋಪಿಗಳಿಗೆ ತಲಾ ಒಂದು ವರ್ಷ ಜೈಲು ಹಾಗೂ 20 ಸಾವಿರ ದಂಡ ವಿಧಿಸಿದೆ. ದಂಡದ ಮೊತ್ತವನ್ನು ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇರಿಸುವಂತೆ ಆದೇಶಿಸಿದೆ.

ಪೊಲೀಸರ ಆರೋಪವೇನು: ಮಾದೇಶ-ಹೇಮಲತಾ ದಂಪತಿಗೆ ವಿವಾಹವಾದ 6 ವರ್ಷಗಳ ಬಳಿಕ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಹೆಣ್ಣು ಮಕ್ಕಳು ಹುಟ್ಟಿದವು ಎಂಬ ಕಾರಣಕ್ಕೆ ಪತಿ, ಅತ್ತೆ ಹಾಗೂ ನಾದಿನಿ ಕಿರುಕುಳ ನೀಡುತ್ತಿದ್ದರು. ಮನೆ ಖರ್ಚಿಗೆ ಹಣ ಕೇಳಿದ್ದಕ್ಕೆ ಪತ್ನಿ ಹೇಮಲತಾ ಜತೆ ಜಗಳ ತೆಗೆದಿದ್ದ ಪತಿ ಮಾದೇಶ ನಂತರ ಕ್ರೂರವಾಗಿ ಹಲ್ಲೆ ಮಾಡಿದ್ದ. ಬಳಿಕ, ಅತ್ತೆ ಹಾಗೂ ನಾದಿನಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೇಮಲತಾ ಮೇಲೆ ಸೀಮೆ ಎಣ್ಣೆ ಎರಚಿ, ಬೆಂಕಿ ಹಚ್ಚಿದ್ದರು. ಪತಿ ಬೆಂಕಿ ಆರಿಸಿ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದ್ದನಾದರೂ, ಚಿಕಿತ್ಸೆ ಫಲಿಸದೆ ಹೇಮಲತಾ ಮೃತಪಟ್ಟರು ಎಂದು ಪೊಲೀಸರು ಆರೋಪಿಸಿದ್ದರು. ಹಾಗೆಯೇ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 498ಎ, 302 ಹಾಗೂ 34 ಅಡಿ ಎಫ್ಐಆರ್ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಮಂಡ್ಯ ಜಿಲ್ಲಾ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಹೇಮಲತಾ ಸಾವಿಗೆ ಮುನ್ನ ನೀಡಿದ್ದ ಹೇಳಿಕೆಯಲ್ಲಿನ ಗೊಂದಲಗಳು ಹಾಗೂ ಸಾಕ್ಷಿದಾರರ ಪ್ರತಿಕೂಲ ಹೇಳಿಕೆಗಳಿಂದಾಗಿ ಕೋರ್ಟ್ ಖುಲಾಸೆ ಮಾಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪೊಲೀಸರು ಹೈಕೋರ್ಟ್ ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು.

(CRL.A 763/2015)


Share It

You cannot copy content of this page