News

ಉತ್ತರ ನಗರ ಪಾಲಿಕೆಯ ಸಾಮೂಹಿಕ ಸ್ವಚ್ಛತಾ ಕಾರ್ಯ; 1350 ಟನ್ ತ್ಯಾಜ್ಯ ತೆರವು

Share It

ಬೆಂಗಳೂರು: ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮವನ್ನು ಭಾನುವಾರ ಬೆಳಿಗ್ಗೆ 7 ಗಂಟೆ ಇಂದ ಸಂಜೆ 4 ರವರೆಗೆ ನಡೆಸಲಾಯಿತು.

ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛತಾ ಅಭಿಯಾನವನ್ನು ಪರಿಶೀಲಿಸಿ, ಅಗತ್ಯ ಸೂಚನೆಗಳನ್ನು ನೀಡಿದರು.

ಸ್ವಚ್ಛತಾ ಕಾರ್ಯವನ್ನು ನಾಗವಾರ ಜಂಕ್ಷನ್ ನಿಂದ ಹೆಬ್ಬಾಳ ಜಂಕ್ಷನ್ ಕಡೆಯಿಂದ ಅಲ್ಲಾಳಸಂದ್ರ ಬ್ರಿಡ್ಜ್ ನೆಡೆಸಲಾಯಿತು. ಕಾರ್ಯದಲ್ಲಿ ಮೆಟ್ರೋ, ನ್ಯಾಷನಲ್ ಹೈವೆ ಅಥಾರಿಟಿ, ಬಿ-ಸ್ಮೈಲ್, ಜಲಮಂಡಳಿ, ಬೆಸ್ಕಾಂ, ರಸ್ತೆಯ ಸುತ್ತ ಮುತ್ತಲಿರುವ ವಾಣಿಜ್ಯ ಮಳಿಗೆ ಮತ್ತು ಉದ್ದಿಮೆದಾರರು ಹಾಗೂ ಸ್ಥಳೀಯ ಸಂಘಟನೆಗಳು ಭಾಗವಹಿಸಿದ್ದವು.

ಈ ಕಾರ್ಯದಲ್ಲಿ ಟ್ರ್ಯಾಕ್ಟರ್, ಜೆಸಿಬಿ ಸೇರಿದಂತೆ ಇತರೆ ಯಂತ್ರೋಪಕರಣಗಳನ್ನು ಬಳಸಿ, ಸಿಬ್ಬಂದಿಗಳನ್ನು ತೊಡಗಿಸಿಕೊಂಡು ಡೆಬ್ರಿಸ್, ರಸ್ತೆ ಇಕ್ಕೆಲಗಳಲ್ಲಿನ ತ್ಯಾಜ್ಯ ಮತ್ತು ಅನುಪಯುಕ್ತ ಗೃಹೋಪಯೋಗಿ ವಸ್ತುಗಳು, ಕಟ್ಟಡ ಭಗ್ನಾವಶೇಷಗಳನ್ನು ತೆರವುಗೊಳಿಸಲಾಯಿತು. ಅಲ್ಲದೇ, ಸ್ವಚ್ಚತಾ ಕಾರ್ಯದ ವೇಳೆ ಮಹೇಂದ್ರ ಶೋ ರೂಂ ಎದುರು ಪಾದಚಾರಿ ಮಾರ್ಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ನಡೆಸುತ್ತಿದ್ದ ಸುಮಾರು 40 ಅಂಗಡಿ ಮುಂಗಟ್ಟುಗಳನ್ನು ತೆರವು ಗೊಳಿಸಿ ಪಾದಚಾರಿ ಮಾರ್ಗವನ್ನು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಹಾಗೂ ಪುನಃ ಒತ್ತುವರಿ ಮಾಡದಂತೆ ತಿಳಿಸಲಾಯಿತು.

ಸ್ವಚ್ಛತಾ ಕಾರ್ಯದ ವೇಳೆ ಕಳೆದ ಒಂದು ವಾರದಿಂದ ಪ್ರತಿದಿನ 150 ಕ್ಕೂ ಹೆಚ್ಚು ಪೌರಕಾರ್ಮಿಕರು, 6 ಜೆಸಿಬಿ, 17 ಟ್ರ್ಯಾಕ್ಟರ್ ಹಾಗೂ 8 ಟಿಪ್ಪರ್ ಮತ್ತು ಕಾಂಪ್ಯಾಕ್ಟರ್ ಗಳನ್ನು ಬಳಸಿ ಕನ್ಸ್ಟ್ರಕ್ಷನ್ ಡೆಬ್ರಿಸ್ ಹಾಗೂ ಇತರೆ ತ್ಯಾಜ್ಯಗಳು ಸೇರಿ ಒಟ್ಟು 1200 ಟನ್ ನಷ್ಟು ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ವಾರ್ಡ್ 14ರ ದಾಸರಹಳ್ಳಿ ವಿಭಾಗದ ಸಾಮೂಹಿಕ ಸ್ವಚ್ಛತಾ ಕಾರ್ಯದಲ್ಲಿ 150 ಟನ್ ತ್ಯಾಜ್ಯ ತೆರವು ಮತ್ತು 80 ಮೀಟರ್ ಉದ್ದದ ಪಾದಾಚಾರಿ ಮಾರ್ಗ ಸೌಂದರೀಕರಣ ಕೂಡ ನಡೆಸಲಾಗಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ದಾಸರಹಳ್ಳಿ ವಿಭಾಗದ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗಳು ಯೂತ್ ಫಾರ್ ಪರಿವರ್ತನ ಸಂಸ್ಥೆಯ 100 ಜನ ಸ್ವಯಂಸೇವಕರ ಸಹಕಾರದೊಂದಿಗೆ ಸಾಮೂಹಿಕ ಸ್ವಚ್ಛತಾ ಕಾರ್ಯವನ್ನು ಕೈಗೊಂಡು, ಕಸದ ಬ್ಲಾಕ್ ಸ್ಪಾಟ್ ಗಳನ್ನು ತೆರವುಗೊಳಿಸಿ, 80 ಮೀಟರ್ ಉದ್ದದ ಪಾದಚಾರಿ ಮಾರ್ಗ ಸೌಂದರೀಕರಣಗೊಳಿಸುವುದರೊಂದಿಗೆ ಸುಮಾರು 130 ಟನ್ ಕಟ್ಟಡ ಬಗ್ನಾವಶೇಷಗಳು ಸೇರಿದಂತೆ 20 ಟನ್ ತ್ಯಾಜ್ಯಸೇರಿ ಒಟ್ಟು 150 ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ.

ಈ ಕಾರ್ಯಾಚರಣೆಯ ಮೂಲಕ ಸಾರ್ವಜನಿಕರಲ್ಲಿ ಮತ್ತು ಬೀದಿಬದಿಯ ವ್ಯಾಪಾರಿಗಳು, ವಾಣಿಜ್ಯ ಮಳಿಗೆ ಮತ್ತು ಉದ್ದಿಮೆದಾರರಲ್ಲಿ ಪಾದಚಾರಿ ಮಾರ್ಗ, ರಸ್ತೆ , ಸುತ್ತಮುತ್ತಲು ಇರುವ ಸ್ಥಳಗಳ ಸ್ವಚ್ಛತೆಯನ್ನು ಸುಧಾರಿಸುವುದು ಮತ್ತು ಕಾಪಾಡುವುದು, ಪರಿಸರ ಸಂರಕ್ಷಣೆ ಹಾಗೂ ನಾಗರಿಕರಲ್ಲಿ ಸ್ವಚ್ಛತಾ ಅಭ್ಯಾಸಗಳನ್ನು ಉತ್ತೇಜಿಸಲಾಯಿತು.

ಈ ಕಾರ್ಯದಲ್ಲಿ ಜಂಟಿ ಆಯುಕ್ತರುಗಳಾದ ಮೊಹಮ್ಮದ್ ನಯೀಮ್ ಮೊಮಿನ್, ಪಲ್ಲವಿ, ಘನತ್ಯಾಜ್ಯ ವಿಭಾಗದ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಕಿರಿಯ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರು ಹಾಗೂ ಮೇಲ್ವಿಚಾರಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.


Share It

You cannot copy content of this page