News

ವಿವಿ ನೇಮಕಾತಿ: ಯುಜಿಸಿ ನಿಯಮ ಪಾಲನೆಗೆ ಹೈಕೋರ್ಟ್ ಆದೇಶ

Share It

ಬೆಂಗಳೂರು: ವಿಶ್ವವಿದ್ಯಾಲಯ ಧನಸಹಯೋಗ ಆಯೋಗದ ನಿಯಮಗಳನ್ನು ಅಳವಡಿಸಿಕೊಂಡಿರುವ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಹುದ್ದೆಗೆ ನೇಮಕ ಮಾಡುವ ಮುನ್ನ ಉನ್ನತಾಧಿಕಾರ ಸಮಿತಿ ವಿಧಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ನ ಧಾರವಾಡ ಪೀಠ ಆದೇಶಿಸಿದೆ.

ಆಯ್ಕೆ ಪಟ್ಟಿಯಲ್ಲಿ ತಮ್ಮನ್ನು ಕೈಬಿಟ್ಟ ಕ್ರಮ ಪ್ರಶ್ನಿಸಿ ಬೆಂಗಳೂರಿನ ಯಲಹಂಕ ನಿವಾಸಿ ಎಸ್.ಎ.ವೇಣು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಧಾರವಾಡ ಕೃಷಿ ವಿವಿಯು ಯುಜಿಸಿ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿರುವುದಾಗಿ 2013ರ ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿದೆ. ಅದರಂತೆ ವಿವಿಯು ಯುಜಿಸಿ ಮಾರ್ಗಸೂಚಿಗಳ ಪ್ರಕಾರ ಸ್ಕೋರ್ ಕಾರ್ಡ್ ಆಧಾರದಲ್ಲಿ ನೇಮಕ ಮಾಡಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಅಂಕಗಳನ್ನಷ್ಟೇ ಪರಿಗಣಿಸಿರುವ ಅಂಶ ಗೊತ್ತಾಗಿದೆ. ಇದು ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದೆ. ಅರ್ಜಿದಾರರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ನಿಯಮಗಳನ್ನು ಮೀರಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೇ, ಯಾವುದೇ ಹುದ್ದೆಗೆ ಯಾರು ಅರ್ಹರು ಎಂಬುದನ್ನು ಪರಿಶೀಲನೆ ಮಾಡುವುದು, ವಿಶ್ವವಿದ್ಯಾಲಯಗಳಿಗೆ ಬಿಟ್ಟ ವಿಚಾರವಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯಪ್ರದೇಶ ಮಾಡುವ ಪರಿಣತಿಯೂ ನ್ಯಾಯಾಲಯಗಳಿಗಿಲ್ಲ, ಆದರೂ, ನೇಮಕಾತಿ ಪ್ರಕ್ರಿಯೆ ಕಾನೂನು ಬಾಹಿರವಾಗಿದ್ದರೆ ಹಾಗೂ ಸಂವಿಧಾನದ ವಿಧಿ 14ರ ಉಲ್ಲಂಘನೆಯಾಗಿದ್ದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿ ಇಡೀ ಪ್ರಕ್ರಿಯೆಯನ್ನೇ ರದ್ದು ಮಾಡಲಿದೆ‌ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಧಾರವಾಡದ ಕೃಷಿ ವಿವಿಯಲ್ಲಿ ಖಾಲಿ ಇದ್ದ ಎಂಜಿನಿಯರ್ ಹುದ್ದೆಗೆ ಅಂಕಗಳನ್ನು ಆಧರಿಸಿ ಡಿ. ನಾಗರಾಜು 85.4 ಅಂಕಗಳನ್ನು ಪಡೆದಿದ್ದು ಅವರನ್ನು ನೇಮಕ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರ ವೇಣು, ನನಗೆ ಆರು ವರ್ಷ ಬೋಧನಾ ಅನುಭವವಿದ್ದು, ಇದಕ್ಕೆ ಆರು ಅಂಕಗಳು ಲಭ್ಯವಾಗಲಿವೆ. ಜತೆಗೆ, ಪಿಎಚ್‌ ಡಿ ಪದವಿಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದು, ಇದಕ್ಕೆ ಮೂರು ಅಂಕಗಳು ಹೆಚ್ಚಳವಾಗಲಿದೆ. ಒಟ್ಟು ಸೇರಿದಲ್ಲಿ 86.6 ಅಂಕಗಳಾಗಲಿದ್ದು, ವಿಶ್ವವಿದ್ಯಾಲಯ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಅಂಕಗಳನ್ನಷ್ಟೇ ಪರಿಗಣಿಸಿದೆ. ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು.


Share It

You cannot copy content of this page