ಬೆಂಗಳೂರು: ಕ್ರಿಸ್‌ಮಸ್ ಪ್ರಯುಕ್ತ ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಕ್ರಿಸ್ತ ನಮನ ಕಾರ್ಯಕ್ರಮವನ್ನು ಕನ್ನಡದಲ್ಲಿಯೇ ಪ್ರಸಾರ ಮಾಡಬೇಕು ಎಂದು ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಎ.ಐಸಾಕ್ ಆಗ್ರಹಿಸಿದರು.
ಮಂಗಳವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಹಿನಿಯು ಕ್ರಿಸ್ಮಸ್ ಹಿನ್ನೆಲೆಯಲ್ಲಿ ಕ್ರಿಸ್ತ ನಮನ ಕಾರ್ಯಕ್ರಮವನ್ನು ಪ್ರತಿ ವರ್ಷ ಪ್ರಸಾರ ಮಾಡುತ್ತಾ ಬಂದಿರುವುದು ಸ್ವಾಗಥಾರ್ಹ. ಇಷ್ಟು ವರ್ಷ ಕನ್ನಡದಲ್ಲಿ ಮಾತ್ರ ಪ್ರಸಾರ ಮಾಡುತ್ತಿದ್ದ ಕ್ರಿಸ್ತ ನಮನ ಕಾರ್ಯಕ್ರಮದಲ್ಲಿ ಈ ವರ್ಷ ತಮಿಳು, ಇಂಗ್ಲಿಷ್ ಭಾಷೆಯೂ ಸೇರಿಕೊಂಡಿರುವುದಾಗಿ ತಿಳಿದುಬಂದಿದೆ ಎಂದರು.
ಕೆಜಿಎಫ್‌ನಲ್ಲಿ ತಮಿಳು ಪಾದ್ರಿಗಳ ಮಾರ್ಗದರ್ಶನದಲ್ಲಿ ಚಿತ್ರೀಕರಣ ನಡೆದಿದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಅದು ನಿಜವೇ ಆಗಿದ್ದಲ್ಲಿ, ಕನ್ನಡದ ಮೇಲೆ ನಡೆಯುವ ನೇರ ಪ್ರಹಾರವಾಗಿದೆ. ಚಂದನ ವಾಹಿನಿ ಈ ತಮಿಳು, ಇಂಗ್ಲಿಷ್ ಕಾರ್ಯಕ್ರಮವನ್ನು ಪ್ರಸಾರ ಮಾಡಬಾರದು. ಕನ್ನಡಿಗರ ಭಾವನೆಯನ್ನು ಗೌರವಿಸದೆ ಕನ್ನಡ ವಿರೋಧಿ ಆರ್ಚ್ ಬಿಷಪ್ ಪಿಟರ್ ಮಚಾಡೋ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನು ಪ್ರಸಾರ ಮಾಡಿದರೆ, ಆಗುವ ಅನಾಹುತಕ್ಕೆ ವಾಹಿನಿಯ ನಿರ್ದೇಶಕರೆ ಜವಾಬ್ದಾರಿಯಾಗುತ್ತಾರೆ ಎಂದು ಎಚ್ಚರಿಸಿದರು.
ಕನ್ನಡ, ತಮಿಳು ಮತ್ತು ಆಂಗ್ಲ ಭಾಷೆಯ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಹೊರಟಿರುವ ಕನ್ನಡಕ್ಕೇ ಮೀಸಲಾದ ಚಂದನ ವಾಹಿನಿಯ ಕನ್ನಡ ವಿರೋಧಿ ಧೋರಣೆಯ ವಿರುದ್ಧ ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘ ಧ್ವನಿ ಎತ್ತುತ್ತದೆ ಎಂದು ಎ.ಐಸಾಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಸಂಘದ ಕಾರ್ಯದರ್ಶಿ ಪಿ ಬರ್ತಲೋಮಿಯೋ, ಖಜಾಂಚಿ ಜಾರ್ಜ್ ಕುಮಾರ್ ವೈ ಉಪಸ್ಥಿತರಿದ್ದರು.
