ಸರ್ಕಾರಿ ವಕೀಲರು ಕೋರಿದ ಮಾಹಿತಿ ನೀಡದ ಹಾಗೂ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಸೇವೆಯಿಂದ ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಚಿತ್ರದುರ್ಗದ ಹಿರಿಯ ನಾಗರಿಕ ವಿಶ್ವನಾಥನ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಎಚ್ಚರಿಕೆ ನೀಡಿದೆ.
ಸರ್ಕಾರದ ಪರ ವಕೀಲರು ಹಲವು ಬಾರಿ ಮನವಿ ಮಾಡಿದರೂ ಮಾಹಿತಿ ನೀಡದ ಚಿತ್ರದುರ್ಗದ ತಹಸೀಲ್ದಾರ್ ನಡೆ ಕುರಿತಂತೆ 2025ರ ಡಿ.8 ರಂದು ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿತ್ತು. ಸರ್ಕಾರದ ಪರ ವಕೀಲರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್, ಚಿತ್ರದುರ್ಗದ ತಹಸೀಲ್ದಾರ್‌ಗೆ 50 ಸಾವಿರ ರೂ. ದಂಡ ಸಹಿತ ವಾರೆಂಟ್ ಜಾರಿಗೊಳಿಸಿ ಡಿಸೆಂಬರ್ 16 ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿತ್ತು. ಅದರಂತೆ ನಿನ್ನೆ ತಹಸೀಲ್ದಾರ್ ವಿಚಾರಣೆಗೆ ಹಾಜರಿದ್ದರು.
ಈ ವೇಳೆ ಅಧಿಕಾರಿಯನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಏನ್ರೀ ತಹಸೀಲ್ದಾರ್ ಏಕೆ ನೀವು ಸರ್ಕಾರಿ ವಕೀಲರಿಗೆ ಮಾಹಿತಿ ನೀಡುತ್ತಿಲ್ಲ? ಎಂದು ಪ್ರಶ್ನಿಸಿದರು. ತಹಸೀಲ್ದಾರ್ ಉತ್ತರಿಸಿ, ‘ಸ್ವಾಮಿ ಮಾಹಿತಿ ನೀಡಲಾಗಿದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಏಕೆ ಸುಳ್ಳು ಹೇಳುತ್ತಿರಿ? ಸರ್ಕಾರಿ ವಕೀಲರು ಪದೆ ಪದೇ ತಿಳಿಸಿದ್ದರೂ ನೀವು ಮಾಹಿತಿ ನೀಡಿಲ್ಲ. ಅವರು ಯಾವಾಗ ಮಾಹಿತಿ ಕೇಳಿದರು? ನೀವು ಯಾವಾಗ ನೀಡಿದ್ದೀರಿ ಎಂಬ ಬಗ್ಗೆ ದಿನಾಂಕ, ಸಮಯ ಸಹಿತ ದಾಖಲೆ ಸಿಗುತ್ತವೆ. ಆ ಬಗ್ಗೆ ವಿಚಾರಣೆ ನಡೆಸಲು ಆದೇಶಿಸಬೇಕೇ? ವಿಚಾರಣೆಯಲ್ಲಿ ವಿಳಂಬವಾಗಿ ಮಾಹಿತಿ ನೀಡಿರುವುದು ದೃಢಪಟ್ಟರೆ, ನಿಮ್ಮನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಲಾಗುತ್ತದೆ ಎಂದರು.
ಇದೇ ವೇಳೆ ಸರ್ಕಾರದ ಪರ ವಕೀಲರು, ಎಸಿ ಆದೇಶದಂತೆ ಕಳೆದ ಭಾನುವಾರ ಮನೆಯನ್ನು ಅರ್ಜಿದಾರರ ಸ್ವಾಧೀನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿ ಮೆಮೊ ಸಲ್ಲಿಸಿದರು.
ಹಿನ್ನೆಲೆ: ಪ್ರಕರಣದ ಅರ್ಜಿದಾರರು ನಿವೃತ್ತ ಸರ್ಕಾರಿ ನೌಕರರಾಗಿದ್ದು, ತಾವು ಗಳಿಸಿದ್ದ ಹಣದಲ್ಲಿ ನಿರ್ಮಿಸಿರುವ ಮನೆಯನ್ನು ಮಕ್ಕಳ ಸ್ವಾಧೀನದಿಂದ ಬಿಡಿಸಿಕೊಡುವಂತೆ ಕೋರಿ ಚಿತ್ರದುರ್ಗದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಉಪವಿಭಾಗಾಧಿಕಾರಿ ಮನೆ ಬಿಟ್ಟುಕೊಡಲು ಮಕ್ಕಳಿಗೆ ನಿರ್ದೇಶಿಸಿ 2023ರ ಫೆಬ್ರವರಿ 22ರಂದು ಆದೇಶಿಸಿದ್ದರು. ಅದರಂತೆ ಅರ್ಜಿದಾರರು ಆದೇಶ ಜಾರಿಮಾಡಿಕೊಡುವಂತೆ ಕೋರಿ ಚಿತ್ರದುರ್ಗ ತಹಸೀಲ್ದಾರ್‌ಗೆ 2023ರ ಏಪ್ರಿಲ್ 5ರಂದು ಮನವಿ ಸಲ್ಲಿಸಿದ್ದರು. ಅಷ್ಟಾದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ನ ಮೆಟ್ಟಿಲೇರಿದ್ದರು.
