News

ಲಿವ್-ಇನ್-ರಿಲೇಶನ್ಷಿಪ್ ನಲ್ಲಿದ್ದ ಮಹಿಳೆಗೆ ಜೀವನಾಂಶ ನಿರಾಕರಿಸಿದ ಹೈಕೋರ್ಟ್‌

Share It

ಮೊದಲ ಮದುವೆ ರದ್ದಾಗದೆ, ಮತ್ತೊಂದು ಸಂಬಂಧದಲ್ಲಿರುವ ಮಹಿಳೆ ಸಂಗಾತಿಯಿಂದ ಕ್ರಿಮಿನಲ್‌ ಪೊಸೀಜರ್‌ ಕೋಡ್‌ನ ಸೆಕ್ಷನ್‌ 125ರಡಿ ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ.

ಜೀವನಾಂಶ ಪರಿಹಾರ ಕೊಡಿಸಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮದನ್‌ಪಾಲ್‌ ಸಿಂಗ್‌ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಅರ್ಜಿದಾರ ಮಹಿಳೆ ತಮ್ಮ ಮೊದಲ ಮದುವೆಯಿಂದ ಕಾನೂನು ಪ್ರಕಾರ ಹೊರಬಂದಿಲ್ಲ. ಅದು ಕೂಡ ಜೀವನಾಂಶವನ್ನು ನೀಡಲು ನಿರಾಕರಿಸಿತ್ತು. ಇದರ ಹೊರತಾಗಿ ಅರ್ಜಿದಾರ ಮಹಿಳೆಗೆ ತನ್ನ ಎರಡನೇ ಸಂಗಾತಿಯ ಜೊತೆ ವಿವಾಹ ನಡೆದಿದೆ ಎಂದು ಭಾವಿಸಿದರೂ ಸಹ, ಅರ್ಜಿದಾರರ ಹಿಂದಿನ ವೈವಾಹಿಕ ಸಂಬಂಧ ಮುಂದುವರೆದಿರುವುದರಿಂದ ಅದು ಅನೂರ್ಜಿತವಾಗುತ್ತದೆ. ಹೀಗಾಗಿ, ದೀರ್ಘಕಾಲದ ಸಂಬಂಧದ ಆಧಾರದ ಮೇಲೆ ಸೆಕ್ಷನ್‌ 125 ಸಿಆರ್‌ಪಿಸಿ ಅಡಿಯಲ್ಲಿ ಜೀವನಾಂಶವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಅಲ್ಲದೇ, ಒಬ್ಬ ಮಹಿಳೆ ಒಬ್ಬ ಪುರುಷನೊಂದಿಗೆ ಕಾನೂನುಬದ್ಧವಾಗಿ ಮದುವೆಯಾಗಿ, ಮೊದಲ ಮದುವೆಯನ್ನು ವಿಸರ್ಜಿಸದೆ ಇನ್ನೊಬ್ಬರೊಂದಿಗೆ ವಾಸಿಸುವ ಮತ್ತು ನಂತರ ಎರಡನೆಯ ಸಂಗಾತಿಯಿಂದ ಜೀವನಾಂಶ ಕೋರುವ ಪದ್ಧತಿಯನ್ನು ಅನುಮತಿಸಿದರೆ, ಸೆಕ್ಷನ್‌ 125 ಸಿಆರ್‌ಪಿಸಿಯ ಉದ್ದೇಶ ಮತ್ತು ವಿವಾಹದ ಪಾವಿತ್ರ್ಯತೆ ಮತ್ತು ಸಾಮಾಜಿಕ ಸಮಗ್ರತೆ ದುರ್ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಪರಿಷ್ಕರಣಾ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರು ಸುಮಾರು 10 ವರ್ಷಗಳ ಕಾಲ ಎರಡನೇ ಸಂಗಾತಿಯೊಂದಿಗೆ ವಾಸಿಸುತ್ತಿದ್ದರೂ ಮತ್ತು ಸಂಬಂಧವು ಮದುವೆಯಂತೆ ಕಂಡುಬಂದರೂ, ಅಂತಹ ಸಹವಾಸವು ಸೆಕ್ಷನ್‌ 125 ಸಿಆರ್‌ಪಿಸಿ ಅಡಿಯಲ್ಲಿ ಹೆಂಡತಿಯ ಕಾನೂನು ಸ್ಥಾನಮಾನವನ್ನು ನೀಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರ ಮಹಿಳೆಯ ಪರ ವಕೀಲರು ವಾದ ಮಂಡಿಸಿ, ಆಧಾರ್‌ ಕಾರ್ಡ್‌ ಮತ್ತು ಪಾಸ್‌‍ಪೋರ್ಟ್‌ ಸೇರಿದಂತೆ ಅಧಿಕೃತ ದಾಖಲೆಗಳಲ್ಲಿ ಆಕೆ ಜತೆಗೆ ವಾಸಿಸುತ್ತಿದ್ದ ವ್ಯಕ್ತಿಯ ಪತ್ನಿ ಎಂದು ದಾಖಲಿಸಲಾಗಿದೆ ಮತ್ತು ಆಕೆಯನ್ನು ಸಾಮಾಜಿಕವಾಗಿ ಆತನ ಸಂಗಾತಿ ಎಂದೇ ಗುರುತಿಸಲಾಗಿದೆ.

ತದನಂತರ ಆ ವ್ಯಕ್ತಿ ತನ್ನ ಪುತ್ರರೊಂದಿಗೆ ಮಹಿಳೆಯನ್ನು ಕಿರುಕುಳಕ್ಕೆ ಒಳಪಡಿಸಿದ್ದಾನೆ ಮತ್ತು ಅವಳನ್ನು ತೊರೆದಿದ್ದಾನೆ. ವೈವಾಹಿಕ ಜೀವನಕ್ಕೆ ನಿರಾಕರಿಸಿದ್ದಾನೆ. ಇದರಿಂದಾಗಿ ಆಕೆಗೆ ಸೆಕ್ಷನ್‌ 125 ಸಿಆರ್‌ಪಿಸಿ ಅಡಿಯಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ವಾದ ಮಂಡಿಸಿದ್ದರು.


Share It

You cannot copy content of this page