ಆರು ವರ್ಷಗಳ ಹಿಂದೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಿಬಿಎಂಪಿ ನೌಕರನೋರ್ವನ ಮರಣ ದೃಢೀಕರಣ ಪತ್ರ ವಿತರಿಸಲು ಸತಾಯಿಸುತ್ತಿದ್ದ ಪ್ರಕರಣದಲ್ಲಿ ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, 30 ದಿನಗಳಲ್ಲಿ ಮೃತರ ಪತ್ನಿಗೆ ಮರಣ ದೃಢೀಕರಣ ಪತ್ರ ನೀಡುವಂತೆ ಸೂಚನೆ ನೀಡಿದೆ.
ಪತಿಯ ಮರಣ ದೃಢೀಕರಣ ಪತ್ರ ವಿತರಿಸಲು ಬಿಬಿಎಂಪಿ ನಿರಾಕರಿಸುತ್ತಿದೆ ಎಂದು ಆಕ್ಷೇಪಿಸಿ ಎಸ್.ಪಿ. ಸರಸ್ವತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಅದೇಶ ಮಾಡಿದೆ.
ಬಿಬಿಎಂಪಿ ನೌಕರರೇ ಆಗಿದ್ದ ಶಾಂತಕುಮಾರ್ ಸಾವನ್ನು ವೈದ್ಯರಿಂದ ದೃಢೀಕರಿಸಿ ಫಾರಂ ನಂ. 4ಎ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದ್ದ ಬಿಬಿಎಂಪಿ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
“ಅರ್ಜಿದಾರರ ಪತಿಯು ಬಿಬಿಎಂಪಿಯ ಕೆಲಸ ಮಾಡುವ ವೇಳೆ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಖುದ್ದು ಪಾಲಿಕೆಯ ಅಧಿಕಾರಿಗಳೇ ಹುಡುಕಾಟ ನಡೆಸಿದ್ದರೂ ದೇಹ ಪತ್ತೆಯಾಗಲಿಲ್ಲ. ಮಾನವೀಯ ನೆಲೆಗಟ್ಟಿನಲ್ಲಿ ಬಿಬಿಎಂಪಿಯೇ ಮೃತನ ಪತ್ನಿಗೆ 10 ಲಕ್ಷ ರೂಪಾಯಿ ಪರಿಹಾರ ಪಾವತಿಸಿದೆ. ಆದರೂ ವೈದ್ಯರು ಸಾವು ಸಂಭವಿಸಿದೆ ಎಂಬುದಾಗಿ ದೃಢೀಕರಿಸಿ ಕರ್ನಾಟಕ ಮರಣ ಮತ್ತು ಜನನ ನೋಂದಣಿ ಅಧಿನಿಯಮ-199ರ ನಿಯಮ 10(3)ರ ಅಡಿಯಲ್ಲಿ ಫಾರಂ ನಂ. 4ಎ ಪ್ರಮಾಣ ಪತ್ರ ನೀಡಬೇಕೆನ್ನುವುದು ಸಮರ್ಥನೀಯವಲ್ಲ ಎಂದು ಬಿಬಿಎಂಪಿಯ ನಡೆಯನ್ನು ಆಕ್ಷೇಪಿಸಿದೆ.
“ಅರ್ಜಿದಾರರ ಪತಿ 2017ರಲ್ಲಿ ಸಾವನ್ನಪ್ಪಿದ್ದಾರೆ. ಅವರ ಮರಣ ಧೃಡೀಕರಣ ಪ್ರಮಾಣ ಪತ್ರದಿಂದ ಅರ್ಜಿದಾರರು ಆರು ವರ್ಷಗಳಿಂದ ವಂಚಿತರಾಗಿದ್ದಾರೆ. ಮರಣ ವರದಿಯನ್ನು ವೈದ್ಯಕೀಯ ದೃಢೀಕರಣ ಮಾಡಬೇಕಿಲ್ಲ. ನಿಯಮಗಳನ್ನು ಪಾಲಿಸಬೇಕೆಂದು ಆದ್ಯತೆ ನೀಡುವ ಮೂಲಕ ಬಿಬಿಎಂಪಿ ನಿಷ್ಠುರವಾಗಿ ನಡೆದುಕೊಳ್ಳಬಾರದು. 30 ದಿನಗಳಲ್ಲಿ ಅರ್ಜಿದಾರರಿಗೆ ಪತಿಯ ಮರಣ ದೃಢೀಕರಣ ಪತ್ರ ನೀಡಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ.
ಅರ್ಜಿ ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ‘ಕರ್ನಾಟಕ ಮರಣ ಮತ್ತು ಜನನ ನೋಂದಣಿ ಅಧಿನಿಯಮ-1999ರ ನಿಯಮ 7ರ ಪ್ರಕಾರ ಪ್ರಮಾಣ ಪ್ರಮಾಣಪತ್ರ ವಿತರಿಸಲು ಕೆಲವು ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ಆಸ್ಪತ್ರೆ ಹೊರತುಪಡಿಸಿ ಇತರೆ ಪ್ರದೇಶದಲ್ಲಿ ಸಾವು ಸಂಭವಿಸಿದ್ದರೆ ಫಾರಂ ನಂ.4ಎ ರೂಪದಲ್ಲಿ ವೈದ್ಯರಿಂದ ಮರಣ ವರದಿ ದೃಢೀಕರಣ ಮಾಡಿಸಿ ಸಲ್ಲಿಸಬೇಕಾಗುತ್ತದೆ. ಅರ್ಜಿದಾರರು ಈ ಪ್ರಮಾಣಪತ್ರ ಒದಗಿಸದ ಕಾರಣ ಡೆತ್ ಸರ್ಟಿಫಿಕೇಟ್ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ಸಮರ್ಥಿಸಿಕೊಂಡಿದ್ದರು.
ಪ್ರಕರಣದ ಹಿನ್ನೆಲೆ : ಶಾಂತಕುಮಾರ್ ಬಿಬಿಎಂಪಿಯಲ್ಲಿ ಎಕ್ಸವೇಟರ್ ಅಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2017ರ ಮೇ 20ರಂದು ರಾತ್ರಿ ಬೆಂಗಳೂರಿನ ಜೆ.ಸಿ. ನಗರದ 60 ಅಡಿ ರಸ್ತೆಯಲ್ಲಿ ಹಿಟಾಚಿ ಯಂತ್ರದ ಮೂಲಕ ಕೆಲಸ ಮಾಡುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಸಾಕಷ್ಟು ಹುಡುಕಾಟದ ನಂತರವೂ ಮೃತದೇಹ ಪತ್ತೆಯಾಗಿರಲಿಲ್ಲ.
