ನಿವೃತ್ತ ಉದ್ಯೋಗಿಯೊಬ್ಬರಿಗೆ ಗ್ರಾಚ್ಯುಟಿ ಹಣ ಪಾವತಿಸಲು ಅನಗತ್ಯ ವಿಳಂಬ ಮಾಡಿರುವ ಪ್ರಾಧಿಕಾರಗಳಿಗೆ ಚಾಟಿ ಬೀಸಿರುವ ಹೈಕೋರ್ಟ್, ಉದ್ಯೋಗಿಯ ಗ್ರಾಚ್ಯುಟಿ ಮೊತ್ತವನ್ನು 30 ದಿನಗಳಲ್ಲಿ ಬಡ್ಡಿ ಸಹಿತ ಪಾವತಿಸುವಂತೆ ಆದೇಶಿಸಿದೆ.
ನಿವೃತ್ತ ಉದ್ಯೋಗಿಗೆ ಪಾವತಿಸಬೇಕಿರುವ 4,09,550 ರೂಪಾಯಿ ಗ್ರಾಚ್ಯುಟಿ ಹಣವನ್ನು ಶೇ.10 ರಷ್ಟು ಬಡ್ಡಿ ಸಮೇತ ಪಾವತಿಸುವಂತೆ ಧಾರವಾಡ ಹೈಕೋರ್ಟ್ ಪೀಠವು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ, ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಪ್ರತಿವಾದಿ ಇಲಾಖೆಗಳು ತನ್ನ ನಿವೃತ್ತ ಉದ್ಯೋಗಿಗೆ ನಿಗದಿತ ಅವಧಿಯಲ್ಲಿ ಗ್ರಾಚ್ಯುಟಿ ಪಾವತಿಸದೇ ನಿಕೃಷ್ಟವಾಗಿ ನಡೆಸಿಕೊಂಡಿದೆ. ನೌಕರ ನಿವೃತ್ತಿಯಾಗಿ 16 ವರ್ಷ ಕಳೆದಿವೆ. ಕಂಟ್ರೋಲಿಂಗ್ ಅಥಾರಿಟಿ ಹಣ ಪಾವತಿಸುವಂತೆ ಆದೇಶಿಸಿ 11 ವರ್ಷ ಕಳೆದಿವೆ. ಅರ್ಜಿದಾರರು ಅರ್ಹರಿದ್ದರೂ ಗ್ರಾಚ್ಯುಟಿ ಹಣ ಪಾವತಿಸದಿರುವುದು ಬರೀ ವಿಳಂಬವಲ್ಲ, ಅಪರಾಧಿಕ ವಿಳಂಬ. ಇಳಿ ವಯಸ್ಸಿನಲ್ಲಿ ಅವರ ಆರ್ಥಿಕ ಅವಶ್ಯಕತೆಗಳಿಗೆ ಸರ್ಕಾರ ಸ್ಪಂದಿಸದಿರುವುದು ಸರಿಯಾದ ಕ್ರಮವಲ್ಲ ಎಂದು ಸರ್ಕಾರದ ನಡೆಯನ್ನು ನ್ಯಾಯಪೀಠ ಟೀಕಿಸಿದೆ.
ಅಲ್ಲದೇ, ಅರ್ಜಿದಾರರಾದ ನಿವೃತ್ತ ಉದ್ಯೋಗಿಗೆ 4.9 ಲಕ್ಷ ಗ್ರಾಚ್ಯುಟಿ ಮೊತ್ತವನ್ನು ಶೇ.10 ರಷ್ಟು ಬಡ್ಡಿಯೊಂದಿಗೆ ಮುಂದಿನ 30 ದಿನಗಳಲ್ಲಿ ಪಾವತಿಸಬೇಕು. ತಪ್ಪಿದ್ದಲ್ಲಿ ಹಣ ಪಾವತಿಸುವವರೆಗೆ ಪ್ರತಿ ದಿನಕ್ಕೆ 1 ಸಾವಿರದಂತೆ ದಂಡ ಸೇರಿಸಿ ಪಾವತಿಸಬೇಕು. ಈ ದಂಡದ ಮೊತ್ತಕ್ಕೂ ಬಡ್ಡಿ ಸೇರಿಸಿ ಕೊಡಬೇಕು ಎಂದು ಹೈಕೋರ್ಟ್ ಪ್ರತಿವಾದಿ ಇಲಾಖೆಗಳಿಗೆ ಖಡಕ್ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಬಾಬು ಎಂಬುವವರು 1973 ರಲ್ಲಿ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನಲ್ಲಿ ಎಫ್.ಡಿ.ಎ ಆಗಿ ನೌಕರಿಗೆ ಸೇರಿದ್ದರು. ಒಟ್ಟು 34 ವರ್ಷಗಳ ಕಾಲ ಸೇವೆ ಸಲ್ಲಿಸಿ 2007ರ ಮಾರ್ಚ್ 31 ರಂದು ನಿವೃತ್ತರಾಗಿದ್ದರು. ಆದರೆ ಗ್ರಾಚುಟಿ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರ ಬಾಬು ‘ದಿ ಪೇಮೆಂಟ್ ಆಫ್ ಗ್ರಾಚ್ಯುಟಿ ಆಕ್ಟ್’ ಅಡಿ ಪರಿಹಾರ ಕೋರಿ ‘ಕಂಟ್ರೋಲಿಂಗ್ ಅಥಾರಿಟಿ‘ಗೆ ದೂರು ಸಲ್ಲಿಸಿದ್ದರು. ಅಥಾರಿಟಿ 4.9 ಲಕ್ಷ ಹಣ ಪಾವತಿಸಲು ಇಲಾಖೆಗಳಿಗೆ ಆದೇಶಿಸಿತ್ತು. ಸರ್ಕಾರ ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
WRIT PETITION NO. 111248 OF 2014 (S-RES)
