ಆರೋಪಿಗೆ ಜಾಮೀನು ನೀಡುವ ವೇಳೆ ಆತ ತನ್ನ ಗೂಗಲ್ ಲೊಕೇಷನ್ ಅನ್ನು ತನಿಖಾಧಿಕಾರಿಗೆ ನೀಡಬೇಕೆಂದು ಷರತ್ತು ವಿಧಿಸುವುದು ಖಾಸಗಿ ಹಕ್ಕಿನ ಉಲ್ಲಂಘನೆ ಎಂದು ಟೀಕಿಸಿರುವ ಸುಪ್ರೀಂಕೋರ್ಟ್ ಈ ಕುರಿತು ಹೆಚ್ಚಿನ ವಿವರಣೆ ನೀಡುವಂತೆ ಸೂಚಿಸಿದೆ.
ಕೋಟ್ಯಂತರ ರೂಪಾಯಿ ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಕ್ತಿ ಭೋಗ್ ಫುಡ್ಸ್ ಲಿಮಿಟೆಡ್ ನ ಲೆಕ್ಕ ಪರಿಶೋಧಕರಿಗೆ ಜಾಮೀನು ನೀಡಿರುವ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ, ಷರತ್ತುಬದ್ದ ಜಾಮೀನಿನ ಅವಧಿಯುದ್ದಕ್ಕೂ ಆರೋಪಿಯ ಗೂಗಲ್ ಲೊಕೇಷನ್ ಅನ್ನು ತನಿಖಾಧಿಕಾರಿಗೆ ಒಪ್ಪಿಸಬೇಕೆಂಬ ಷರತ್ತು ಎಷ್ಟು ಸೂಕ್ತ. ಇಂತಹ ಷರತ್ತು ಸಂವಿಧಾನದ ವಿಧಿ 21ರ ಅಡಿ ಸಮ್ಮತವೇ ಎಂದು ಪ್ರಶ್ನಿಸಿದೆ. ಈ ಷರತ್ತಿನ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಮುಂದಾಗಿರುವ ಸುಪ್ರೀಂಕೋರ್ಟ್ ಹೆಚ್ಚಿನ ವಿವರಣೆ ನೀಡುವಂತೆ ಜಾರಿ ನಿರ್ದೇಶನಾಲಯ ಪರ ವಕೀಲರಿಗೆ ಸೂಚಿಸಿದೆ.
ಹಿನ್ನೆಲೆ: ಹಣಕಾಸು ವಂಚನೆ ಪ್ರಕರಣದ ಆರೋಪಿಗೆ ಜಾಮೀನು ನೀಡುವ ವೇಳೆ ದೆಹಲಿ ಹೈಕೋರ್ಟ್ ಕೆಲ ಷರತ್ತುಗಳನ್ನು ವಿಧಿಸಿತ್ತು. ಆರೋಪಿ 50 ಸಾವಿರ ರೂಪಾಯಿ ಮೊತ್ತಕ್ಕೆ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ವ್ಯಕ್ತಿಯೊಬ್ಬರ ಭದ್ರತೆ ಒದಗಿಸಬೇಕು. ದೇಶ ಬಿಟ್ಟು ತೆರಳಬಾರದು. ಪಾಸ್‌ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು. ತನಿಖೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗೆ ಎಲ್ಲಾ ಅಗತ್ಯ ಸಹಕಾರ ನೀಡಬೇಕು. ನ್ಯಾಯಾಲಯದ ವಿಚಾರಣೆಗೆ ತಪ್ಪದೆ ಹಾಜರಾಗಬೇಕು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಹಾಗೂ ಆರೋಪಿ ತನ್ನ ಗೂಗಲ್ ಲೊಕೇಷನ್ ಪಿನ್ ಅನ್ನು ತನಿಖಾಧಿಕಾರಿಗೆ ಜಾಮೀನು ಅವಧಿಯುದ್ದಕ್ಕೂ ನೀಡಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿತ್ತು. ಆರೋಪಿಗೆ ಜಾಮೀನು ನೀಡಿದ ಹೈಕೋರ್ಟ್ ಕ್ರಮ ಪ್ರಶ್ನಿಸಿ ಇ.ಡಿ ಸುಪ್ರೀಂ ಮೊರೆ ಹೋಗಿತ್ತು.
