ಕ್ರಿಮಿನಲ್ ಪ್ರಕರಣವೊಂದರ ತೀರ್ಪಿನಲ್ಲಿ ಆರೋಪಿಯ ಜಾತಿ ನಮೂದಿಸಿದ ರಾಜಸ್ಥಾನ ಹೈಕೋರ್ಟ್ ನಡೆಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುವಾಗ ಆರೋಪಿಯ ಜಾತಿ ಅಥವಾ ಧರ್ಮಕ್ಕೆ ಯಾವುದೇ ಪ್ರಸ್ತುತತೆ ಇರುವುದಿಲ್ಲ. ಹಾಗಿದ್ದರೂ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳು ಪ್ರಕರಣದ ತೀರ್ಪಿನ ಶೀರ್ಷಿಕೆಯಲ್ಲಿ ಆರೋಪಿಯ ಜಾತಿಯನ್ನು ಏಕೆ ಉಲ್ಲೇಖಿಸಿವೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಪ್ರಕರಣದ ಶೀರ್ಷಿಕೆಯಲ್ಲಿ ಪಕ್ಷಗಾರರನ್ನು ಜಾತಿ ಅಥವಾ ಧರ್ಮದ ಆಧಾರದಲ್ಲಿ ಎಂದಿಗೂ ಉಲ್ಲೇಖಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಪೋಕ್ಸೊ ಪ್ರಕರಣದ ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 12 ವರ್ಷಕ್ಕೆ ಕಡಿತ ಮಾಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರಕರಣದ ತೀರ್ಪಿನ ಶೀರ್ಷಿಕೆಯಲ್ಲಿ ಆರೋಪಿಯ ಜಾತಿ ಉಲ್ಲೇಖಿಸಿದ್ದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದೆ.
ಅಂತಿಮವಾಗಿ, ಅಪರಾಧ ಕೃತ್ಯದ ತೀವ್ರತೆಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಘಟನೆಯು ಮನಃಸಾಕ್ಷಿಯನ್ನು ಅಲಗಾಡಿಸುವಂತಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಹೈಕೋರ್ಟ್ ಪರಿಗಣನೆಗಳನ್ನು ಬದಿಗೊತ್ತಿದ ಸುಪ್ರೀಂಕೋರ್ಟ್ ಅಪರಾಧಿಗೆ 14 ವರ್ಷಗಳವರೆಗೆ ಯಾವುದೇ ವಿನಾಯಿತಿ ಇಲ್ಲದ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
