ಲಿವ್-ಇನ್ ಸಂಬಂಧಗಳ ಪರಿಕಲ್ಪನೆಯು ಎಲ್ಲರಿಗೂ ಸ್ವೀಕಾರಾರ್ಹ ಅಲ್ಲದಿದ್ದರೂ ಅಂತಹ ಸಂಬಂಧವು ಕಾನೂನುಬಾಹಿರ ಎನ್ನಲಾಗದು. ಹಾಗೆಯೇ, ಮದುವೆಯ ಪಾವಿತ್ರ್ಯವಿಲ್ಲದೆ ಒಟ್ಟಿಗೆ ವಾಸಿಸುವುದು ಅಪರಾಧ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿರುವ ಅಲಹಾಬಾದ್ ಹೈಕೋರ್ಟ್ ಅಂತಹ ಜೋಡಿಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಅಲ್ಲದೇ ಮದುವೆಯ ಬಂಧವಿಲ್ಲದೆ ಒಟ್ಟಿಗೆ ವಾಸಿಸುತ್ತಿರುವ ವ್ಯಕ್ತಿಯ ಬದುಕುವ ಹಕ್ಕನ್ನು ಸಹ ಗೌರವದಿಂದ ನೋಡಬೇಕಾಗುತ್ತದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ವಯಸ್ಕರು ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಶಾಂತಿಯುತ ಜೀವನ ನಡೆಸುತ್ತಿದ್ದರೆ ಅದನ್ನು ಆಕ್ಷೇಪಿಸುವ ಅಥವಾ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ. ಕುಟುಂಬದ ಸದಸ್ಯರಿಗೂ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಪರಸ್ಪರ ಒಪ್ಪಿಗೆಯಿಂದ ಜೀವಿಸಲು ಮುಂದಾಗುವ ದಂಪತಿಗಳ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಸರ್ಕಾರವು ನಿರಾಕರಿಸುವಂತಿಲ್ಲ. ಅರ್ಜಿದಾರರು ವಯಸ್ಕರು ಮತ್ತು ವಿವಾಹದ ಬಂಧವಿಲ್ಲದೆ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದರೆ ಅವರ ನಿರ್ಧಾರವನ್ನು ಪ್ರಶ್ನಿಸಲಾಗದು. ಹೀಗಾಗಿ, ಅರ್ಜಿದಾರರಿಗೆ ಯಾವುದೇ ಅಡ್ಡಿ ಎದುರಾದರೆ, ಅವರು ಈ ಆದೇಶದೊಂದಿಗೆ ಸಂಬಂಧಪಟ್ಟ ಪೊಲೀಸರನ್ನು ಸಂಪರ್ಕಿಸಬಹುದು. ಒಂದೊಮ್ಮೆ ಸಂಪರ್ಕಿಸಿದರೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಹೈಕೋರ್ಟ್ ಎಂದು ನಿರ್ದೇಶಿಸಿದೆ.
