ಫೆಬ್ರವರಿ-ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ, ಬಡವರ ಹಣ ಲೂಟಿ ಮಾಡಿದೆ ಎಂಬ ವಿರೋಧ ಪಕ್ಷ ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಆರೋಪಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ,
ಬೆಳಗಾವಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಲೆಕ್ಷನ್ ಕಿಂಗ್ ಅಂದರೆ ಅದು ಬಿ ವೈ ವಿಜಯೇಂದ್ರ. ಅವರ ಕಲೆಕ್ಷನ್ ಬಗ್ಗೆ ಬಿಚ್ಚಿಡಬೇಕಾ, ವಿಜಯೇಂದ್ರಗೆ ಅನುಭವದ ಕೊರತೆಯಿದೆ. ಅವರ ತಂದೆ ಯಡಿಯೂರಪ್ಪ ಹೆಸರು ಕೆಡಿಸಿದ್ದು ವಿಜಯೇಂದ್ರನೇ ಎಂದು ಗುಡುಗಿದ್ದಾರೆ.
ವಿರೋಧ ಪಕ್ಷದವರ ಮಾತು, ಆರೋಪದಲ್ಲಿ ಇತಿಮಿತಿ ಇರಬೇಕು, ರಾಜ್ಯದ ಯಾವ ಖಜಾನೆ ಖಾಲಿಯಾಗಿದೆ, ಈ ಬಗ್ಗೆ ಸದನಕ್ಕೆ ಬಂದು ಮಾತನಾಡಲಿ, ತಪ್ಪಿಸಿಕೊಂಡು ಹೊರಗೆ ಮಾತನಾಡುವುದಲ್ಲ, ಸದನದಲ್ಲಿ ಪ್ರಶ್ನೆ ಮಾಡಲಿ ಎಂದು ಸವಾಲು ಹಾಕಿದರು.
