News

ಸಾರಿಗೆ ನೌಕರರಿಗೆ ವೇತನ ಹೆಚ್ಚಳ: ಸುಳಿವು ನೀಡಿದ ಸಚಿವ

Share It

ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಲು ಸರಕಾರ ಸಜ್ಜಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವೇತನ ಹೆಚ್ಚಳದ ಸುಳಿವು ನೀಡಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶದಲ್ಲಿ ವೇತನ ಪರಿಷ್ಕರಣೆ ಕುರಿತು ಅಧಿವೇಶನದ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಸಚಿವ ತಿಳಿಸಿದ್ದಾರೆ.

ಶೂನ್ಯವೇಳೆಯಲ್ಲಿ ಮೇಲ್ಮನೆ ಸದಸ್ಯ ಸಿ.ಟಿ. ರವಿ ಅವರ ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತ ಪ್ರಸ್ತಾಪದ ಬಗ್ಗೆ ಮಾತನಾಡಿದ ಸಚಿವರು, ನಾಲ್ಕು ಸಾರಿಗೆ ನಿಗಮಗಳಲ್ಲಿ ಸುಮಾರು ಒಂದು ಲಕ್ಷ ನೌಕರರಿದ್ಧಾರೆ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವ ಸಂಪ್ರದಾಯವಿದೆ. 2020ರಲ್ಲಿ ಮಾಡಬೇಕಿದ್ದ ಪರಿಷ್ಕರಣೆ ಕೊರೊನಾ ಹಿನ್ನೆಲೆಯಲ್ಲಿ ತಡವಾಯಿತು. 2023ರಲ್ಲಿ ಸರ್ಕಾರ ಇದರ ಪರಿಷ್ಕರಣೆ ಮಾಡಬೇಕಿತ್ತು. ಆದರೆ, ಬಜೆಟ್​​ನಲ್ಲಿ ಹಣ ಇಟ್ಟಿರಲಿಲ್ಲದಿದ್ದರಿಂದ ಸಾಧ್ಯವಾಗಿಲ್ಲ. ಇದೀಗ ವೇತನ ಪರಿಷ್ಕರಣೆಯನ್ನ 2027ರಲ್ಲಿ ಮಾಡಬೇಕಿದೆ. ಆದರೆ ನೌಕರರು ಹಿಂಬಾಕಿ ವೇತನ ನೀಡಬೇಕೆಂದು ಪಟ್ಟು ಹಿಡಿದಿದ್ಧಾರೆ. ನೌಕರರ ಸಂಘಟನೆಗಳೊಂದಿಗೆ ಹಲವು ಬಾರಿ ಸಭೆ ನಡೆಸಿದರೂ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.

38 ತಿಂಗಳ ಹಿಂಬಾಕಿ ವೇತನ ಜತೆಗೆ ವೇತನ ಪರಿಷ್ಕರಣೆ ಸಂಬಂಧಿಸಿದಂತೆ ನಿವೃತ್ತ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ಅವರ ಏಕಸದಸ್ಯ ಸಮಿತಿ ರಚಿಸಲಾಗಿತ್ತು. ಅಧ್ಯಯನ ನಡೆಸಿದ ಸಮಿತಿಯು 14 ತಿಂಗಳ ಹಿಂಬಾಕಿ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದರು. ಅಲ್ಲದೆ 2027ರಲ್ಲಿ ಆಗಬೇಕಿದ್ದ ವೇತನ ಪರಿಷ್ಕರಣೆಯನ್ನ 2026ರಲ್ಲಿ ಮಾಡಲು ಹಸಿರು ನಿಶಾನೆ ತೋರಿದ್ದರು. ಆದರೆ ನೌಕರರ ಸಂಘವು ಇದಕ್ಕೆ ಒಪ್ಪಿರಲಿಲ್ಲ. ಸಂಘದೊಂದಿಗೆ ಡಿ.13ರಂದು ಸಭೆ ನಡೆಸಿದ್ದೇವೆ. ಅಧಿವೇಶನ ಮುಗಿದ ಬಳಿಕ ಸಿಎಂ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.


Share It

You cannot copy content of this page