News

ಮುಂದಿನ ಶೈಕ್ಷಣಿಕ ವರ್ಷದಲ್ಲಿ 11 ಸಾವಿರ ಶಿಕ್ಷಕರ ನೇಮಕ

Share It

ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ಹರೀಶ ಪೂಂಜ ಅವರ ಪ್ರಶ್ನೆಗೆ ಉತ್ತರ ನೀಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ರಾಜ್ಯದಲ್ಲಿ 41,088 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. 1,78,935 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 1,33,345 ಹುದ್ದೆಗಳು ಭರ್ತಿಯಾಗಿದ್ದು, 45,590 ಹುದ್ದೆಗಳು ಖಾಲಿ ಇರುತ್ತವೆ. ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ನೇಮಕಾತಿ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದರು.

ರಾಜ್ಯದಲ್ಲಿ 5,024 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಈ ಪ್ರೌಢಶಾಲೆಗಳಿಗೆ 44,144 ಹುದ್ದೆಗಳು ಮಂಜೂರಾಗಿರುತ್ತವೆ. ಈ ಪೈಕಿ 32,010 ಹುದ್ದೆಗಳು ಭರ್ತಿಯಾಗಿದ್ದು 12,134 ಹುದ್ದೆಗಳು ಖಾಲಿ ಇರುತ್ತವೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ 2025-2026ನೇ ಶೈಕ್ಷಣಿಕ ಸಾಲಿಗೆ ಪ್ರಾಥಮಿಕ ಶಾಲೆಗಳಲ್ಲಿ 40,000 ಮತ್ತು ಪ್ರೌಢಶಾಲೆಗಳಲ್ಲಿ 11,000 ಒಟ್ಟಾರೆಯಾಗಿ 51,000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವ ಮೂಲಕ ಶಿಕ್ಷಕರ ಕೊರತೆಯನ್ನು ಸರಿದೂರಿಸಲಾಗಿದೆ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ಅಲ್ಲದೇ ವಿಕಲಚೇತನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ದೃಷ್ಟಿಯಿಂದ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಬೆಳಿಗ್ಗೆ ಬಿಸಿ ಹಾಲು, ಇದರೊಂದಿಗೆ ಮಿಕ್ಸ್ ರಾಗಿ ಮಾಲ್ಟ್, ಮಧ್ಯಾಹ್ನ ಬಿಸಿ ಊಟದೊಂದಿಗೆ ವಾರದಲ್ಲಿ ಆರು ದಿನ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

ವಿದ್ಯಾವಿಕಾಸ ಯೋಜನೆಯಡಿ 1 ರಿಂದ 10ನೇ ತರಗತಿಯ ಮಕ್ಕಳಿಗೆ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಸಮವಸ್ತ್ರ ಸರಬರಾಜು ಮಾಡಲು ಮೊದಲನೇ ಜೊತೆ ಸಮವಸ್ತ್ರಕ್ಕಾಗಿ ₹83.07 ಕೋಟಿ ಬಿಡುಗಡೆ ಮಾಡಲಾಗಿದ್ದು, ಎರಡನೇ ಜೊತೆ ಸಮವಸ್ತ್ರಕ್ಕಾಗಿ ₹80.66 ಕೋಟಿ ಲಭ್ಯವಿರುತ್ತದೆ ಎಂದರು.


Share It

You cannot copy content of this page