ಅಪ್ರಾಪ್ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಶ್ರೀ ಹಠಯೋಗಿ ಲೋಕೇಶ್ವರ ಮಹಾಸ್ವಾಮೀಜಿಗೆ 35 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ರಾಯಬಾಗ ತಾಲೂಕು ಮೇಖಳಿ ಗ್ರಾಮದ ಶ್ರೀ ಹಠಯೋಗಿ ಲೋಕೇಶ್ವರ ಮಹಾಸ್ವಾಮಿ ಅಲಿಯಾಸ್ ಲೋಕೇಶ್ವರ ಸಾಬಣ್ಣ ಜಂಬಗಿ ಮೇಲಿನ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ದೋಷಿ ಎಂದು ತೀರ್ಮಾನಿಸಿತ್ತು. ಅದರಂತೆ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಆರೋಪವೇನು: 2025 ರ ಮೇ 13 ರಂದು ನಿಮ್ಮ ಮನೆಗೆ ಹೋಗುತ್ತಿದ್ದೇನೆ. ನೀನು ಬಾ, ನಿಮ್ಮ ಮನೆಗೆ ಬಿಡುತ್ತೇನೆ ಎಂದು ಬಾಲಕಿಯನ್ನು ತಮ್ಮ ಕಾರಿಗೆ ಹತ್ತಿಸಿಕೊಂಡು, ಬಳಿಕ ರಾಯಚೂರಿಗೆ ಕರೆದೊಯ್ದು, ಅಲ್ಲಿನ ಲಾಡ್ಜ್ ನಲ್ಲಿ ಮೇ 14 ರಂದು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಬಾಗಲಕೋಟೆಗೆ ಮೇ 16 ರಂದು ಬಂದು ಲಾಡ್ಜ್ ನಲ್ಲಿ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾನೆ. ನಂತರ ಕಾರಿನಲ್ಲಿ ಕರೆತಂದು ಮಹಾಲಿಂಗಪುರದ ಬಸ್ ನಿಲ್ದಾಣದಲ್ಲಿ ಇಳಿಸಿ, ನಿಮ್ಮ ಮನೆಗೆ ಹೋಗು ಎಂದು ಹೇಳಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿತ್ತು.
ಈ ಕುರಿತಂತೆ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೋಡ ತನಿಖೆ ನಡೆಸಿ, ದೋಷಾರೋಪಣೆಪಟ್ಟಿಯನ್ನು ಬೆಳಗಾವಿಯ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಅವರು , ಶ್ರೀ ಹಠಯೋಗಿ ಲೋಕೇಶ್ವರ ಮಹಾಸ್ವಾಮಿ ಮೇಲಿನ ಆರೋಪ ಸಾಬೀತಾಗಿವೆ ಎಂದು ತೀರ್ಪು ನೀಡಿದ್ದರು ಹಾಗೂ ಇಂದು ಶಿಕ್ಷೆಯ ಪ್ರಮಾಣ ನಿಗದಿ ಮಾಡಲು ಪ್ರಕರಣವನ್ನು ನಿಗದಿ ಮಾಡಿದ್ದರು. ಅದರಂತೆ ಇಂದು ಅಪರಾಧಿ ಸ್ವಾಮೀಜಿಗೆ 35 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಲ್. ವಿ. ಪಾಟೀಲ ವಾದ ಮಂಡಿಸಿದ್ದರು.
