ಚಿಕ್ಕೋಡಿ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿಗಳೊಂದಿಗೆ ಸಭೆ ಮಾಡಿದ್ದಾರೆ. ಮುಂದಿನ ಪ್ರಕ್ರಿಯೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಚಿಕ್ಕೋಡಿ ನ್ಯಾಯಾಲಯದ ನೂತನ ಕಟ್ಟಡ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಭೆ ಮಾಡಿದ್ದಾರೆ. ಸಚಿವರೂ ಕೂಡ ಚಿಕ್ಕೋಡಿ, ಬೆಳಗಾವಿ, ಗೋಕಾಕ್ ಜನರೊಂದಿಗೆ ಸಭೆ ನಡೆಸಿದ್ದಾರೆ ಎಂದರು.
ಮಹಾರಾಷ್ಟ್ರ ಸಂಸದರು ಬೆಳಗಾವಿ ಡಿಸಿ ವಿರುದ್ಧ ಲೋಕಸಭಾ ಸ್ಪೀಕರ್ಗೆ ದೂರು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲೂ ಇಲ್ಲದ ಗೊಂದಲವನ್ನು ಸೃಷ್ಟಿ ಮಾಡಲು ಏಕೆ ಹೊರಟಿದ್ದೀರಿ. ಕನ್ನಡಿಗರು ಮರಾಠಿಗರು ಸಹೋದರರಂತೆ ಸಹಬಾಳ್ವೆಯಿಂದ ಇದ್ದೇವೆ. ಯಾಕೆ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ. ರಾಜಕೀಯ ಉದ್ದೇಶದಿಂದ ಗೊಂದಲ ಸೃಷ್ಟಿ ಮಾಡೋದು ಸೂಕ್ತವಲ್ಲ ಎಂದರು.
