News

ಎಸ್.ಐ.ಆರ್ ರಾಷ್ಟ್ರೀಯ ಭದ್ರತೆಗೆ ಪೂರಕವಾದ ಪ್ರಕ್ರಿಯೆ: ಡಾ ಅನುರಾಗ್ ತ್ರಿಪಾಠಿ

Share It

ಬೆಂಗಳೂರು: ಎಸ್. ಐ.ಆರ್ ನಮ್ಮ ರಾಷ್ಟ್ರೀಯ ಭದ್ರತೆಗೆ ಪೂರಕವಾದ ಪ್ರಕ್ರಿಯೆಯಾಗಿದೆ. ಅನಿಯಂತ್ರಿತ ಮತ್ತು ಕಾನೂನು ಬಾಹಿರ ವಲಸೆಯನ್ನು ತಡೆಯಲು ಇದರಿಂದ ಸಾಧ್ಯವಿದ್ದು, ನಮ್ಮ ಸಂಸ್ಕೃತಿ ಆಸ್ಮಿಕತೆಯನ್ನು ಸಹ ಉಳಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಕ್ರೈಸ್ಟ್ ವಿಶ್ವದ್ಯಾಲಯದ ಪ್ರಾಧ್ಯಾಪಕರಾದ ಡಾ ಅನುರಾಗ್ ತ್ರಿಪಾಠಿ ಅಭಿಪ್ರಾಯಪಟ್ಟರು.

ಭಾನುವಾರ ಸೌತ್ ಎಂಡ್ ಸರ್ಕಲ್ ಬಳಿಯಿರುವ ಗುರು ಅಂಡ್ ಜನ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯಲ್ಲಿ “ಎಸ್.ಐ.ಆರ್ ನಿಂದಾಗುವ ರಾಷ್ಟ್ರೀಯ ಭದ್ರತಾ ಪರಿಣಾಮಗಳು” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೂರಕ ದಾಖಲೆಗಳಿಲ್ಲದೆ ವಲಸೆ ಬಂದ ಜನರು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು. ಆದರೆ ಚುನಾವಣಾ ಆಯೋಗ ಈ ವರ್ಷದಿಂದ ಅಂತವರನ್ನು ಗುರುತಿಸಿ ಹೊರಗಿಡುವ ಕೆಲಸವನ್ನು ಮಾಡುತ್ತಿದೆ. ಇದರಿಂದ ನಮ್ಮ ದೇಶದ ಪ್ರಜೆಗಳಿಗೆ ಅತಿ ಸುಲಭವಾಗಿ ತಮ್ಮ ಹೆಸರನ್ನು ಅಧಿಕೃತವಾಗಿ ದಾಖಲಿಸಿ ಮತದಾನ ಮಾಡುವ ಹಕ್ಕು ದೊರೆಯಲಿದೆ. ಇದರಿಂದ ಸಾಕಷ್ಟು ಇತರ ಸಮಸ್ಯೆಗಳಿಗೆ ಸಹ ಪರಿಹಾರ ದೊರೆಯಲಿದೆ ಎಂದರು.

ಅಕ್ರಮ ವಲಸಿಗರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ದೇಶ ದ್ರೋಹದ ಕೆಲಸವನ್ನು ಮಾಡುತ್ತಿದ್ದಾರೆ. ಸಾಮಾಜಿಕ ಶಾಂತಿಯನ್ನು ಕದಡುವ ಕಾರ್ಯಕ್ಕೆ ಸಹ ಮುಂದಾಗಿದ್ದಾರೆ. ಇವರಿಂದ ದೇಶದ ಆರ್ಥಿಕತೆಗೆ ಸಹ ದೊಡ್ಡ ಪೆಟ್ಟು ಬೀಳುತ್ತಿದೆ. ಇತ್ತೀಚೆಗೆ ನಡೆದ ಬಿಹಾರ ಚುನಾವಣೆಯಲ್ಲಿ ಅತ್ಯಂತ ಸ್ಪಷ್ಟ ಫಲಿತಾಂಶ ದೊರೆಯಲು ಸಾಧ್ಯವಾಗಿದ್ದು ಎಸ್. ಐ. ಆರ್ ಪ್ರಕ್ರಿಯೆಯಿಂದ ಎಂದರೆ ಅದು ಅತಿಶಯೋಕ್ತಿ ಅಲ್ಲ ಎಂದು ಹೇಳಿದರು.

ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಮತ ಪಡೆದ ವ್ಯಕ್ತಿ ಜಪ್ರತಿನಿಧಿಯಾಗಿ ಆಯ್ಕೆಯಾಗುತ್ತಾನೆ. ಅಕ್ರಮ ಮತದಾರರಿಂದ ಒಬ್ಬ ಯೋಗ್ಯನಲ್ಲದ ವ್ಯಕ್ತಿ ವಿಧಾನಸಭೆ ಅಥವಾ ಲೋಕಸಭೆಯ ಸದಸ್ಯನಾಗುತ್ತಾನೆ ಅವನು ರೂಪಿಸುವ ನೀತಿ ನಿರೂಪಣೆಗಳು ದೇಶಕ್ಕೆ, ರಾಜ್ಯಕ್ಕೆ ಮತ್ತು ಸಾಮಾನ್ಯ ಜನಕ್ಕೆ ಪೂರಕವಾಗಿರಲು ಸಾಧ್ಯವಿಲ್ಲ. ಆದ್ದರಿಂದ ಸಾಮಾನ್ಯ ಜನರು ಎಸ್. ಐ. ಆರ್ ಪ್ರಕ್ರಿಯೆಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಮುಂದಿನ ಪಂಚರಾಜ್ಯ ಚುನಾವಣೆಯಲ್ಲಿ ಇದರ ಫಲಿತಾಂಶಗಳು ಕಂಡು ಬರಲಿದೆ ಎಂದು ತಿಳಿಸಿದರು.

ಹಲವಾರು ಪಕ್ಷಗಳು ತಮ್ಮ ತಮ್ಮ ಸ್ವಹಿತಾಸಕ್ತಿಗಾಗಿ ಮತದಾರರ ಪಟ್ಟಿಯ ಶುದ್ಧೀಕರಣ ಪ್ರಕ್ರಿಯೆಯನ್ನು ತಡೆಯಲು ಪ್ರಯತ್ನಿಸುತ್ತಿವೆ. ಸುಪ್ರೀಂ ಕೋರ್ಟ್ ನಲ್ಲಿ ಇಲ್ಲ ಸಲ್ಲದ ದಾವೆಗಳನ್ನು ಹೂಡುವ ಮೂಲಕ ಚುನಾವಣಾ ಆಯೋಗವನ್ನು ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈಹಾಕಿವೆ. ಆದರೆ ಪಾರದರ್ಶಕ ಚುನಾವಣೆ ನಡೆಸಲು ದೇಶದ ಸಂವಿಧಾನವೇ ಪರಮಾಧಿಕಾರವನ್ನು ನೀಡಿದ್ದು ಇದನ್ನು ತಡೆಯುವ ಕುತಂತ್ರಗಳು ಫಲಿಸುವುದಿಲ್ಲ ಎಂದು ಡಾ ಅನುರಾಗ್ ತ್ರಿಪಾಠಿ ವಿಶ್ವಾಸ ವ್ಯಕ್ತಪಡಿಸಿದರು.

ಸಂವಾದದಲ್ಲಿ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಭಾಸ್ಕರ್ ರಾವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.


Share It

You cannot copy content of this page