2026ರ ಸಂಕ್ರಾಂತಿ ಬಳಿಕ ಚಿನ್ನ ಮತ್ತು ಬೆಳ್ಳಿಯ ದರಗಳು ಮತ್ತಷ್ಟು ಏರಿಕೆಯಾಗಲಿವೆ ಎಂದು ಚಿನ್ನಾಭರಣ ಸಂಘಟನೆಗಳು ಹೇಳಿವೆ.
ಅಂತರ್ರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳು ನಿರೀಕ್ಷೆ ಮೀರಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಿ-ಬಂಗಾರದಲ್ಲಿ ಹೂಡಿಕೆ ಮಾಡುವುದೇ ಹೆಚ್ಚು ಸುರಕ್ಷಿತ ಎಂಬುದು ಹೂಡಿಕೆದಾರರ ನಿಲುವಾಗಿದೆ. ಹೀಗಾಗಿ, ಭೌತಿಕವಾಗಿ ಮತ್ತು ಡಿಜಿಟಲ್ ರೂಪದಲ್ಲಿ ಹಳದಿ ಲೋಹ ಖರೀದಿಯಲ್ಲಿ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಖರೀದಿ ಪ್ರಮಾಣ ಹೆಚ್ಚಾದಂತೆ ಬೆಲೆಗಳು ಕೂಡ ಏರಿಕೆಯಾಗುತ್ತಿವೆ.
ಬೆಲೆ ಏರಿಕೆಗೆ ತಲೆಕೆಡಿಸಿಕೊಳ್ಳದ ಹೂಡಿಕೆದಾರರು ಚಿನ್ನವನ್ನೇ ಹೂಡಿಕೆಗೆ ಆಯ್ಕೆಯಾಗಿ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳೆಯ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ ಎಂಬ ನಂಬಿಕೆಯೂ ಹೂಡಿಕೆದಾರರನ್ನು ಸೆಳೆಯುತ್ತಿದೆ. ಚಿನ್ನ-ಬೆಳ್ಳಿಯ ಮೇಲೆ ಹಣ ಹೂಡುವುದರಿಂದ ತಕ್ಷಣಕ್ಕೆ ಲಾಭ ಸಿಗದಿದ್ದರೂ ಶೇರು ಮಾರುಕಟ್ಟೆಯ ಅನಿಶ್ಚಿತತೆ ಇರುವುದಿಲ್ಲ. ಹೀಗಾಗಿ ಚಿನ್ನ-ಬೆಳ್ಳಿಯ ಮೇಲೆ ಹಣ ಹೂಡಿಕೆ ಸೂಕ್ತ ಎನ್ನುತ್ತಿದ್ದಾರೆ ಹೂಡಿಕೆದಾರರು. ಪ್ರಸಕ್ತ ವರ್ಷ ಚಿನ್ನ ಬೆಳ್ಳಿ ಮೇಲೆ ಹೂಡಿಕೆ ಮಾಡುವವ ಸಂಖ್ಯೆ ಶೇ.10-15ರಷ್ಟು ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ಹೇಳಿದೆ.
ಅಂತರ್ರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳು ಕಾರಣಕ್ಕೆ ಭಾರತವಷ್ಟೇ ಅಲ್ಲದೇ, ವಿಶ್ವದ ಹಲವು ರಾಷ್ಟ್ರಗಳು ತಮ್ಮ ಖಜಾನೆಯಲ್ಲಿ ಚಿನ್ನ ಸಂಗ್ರಹವನ್ನು ಹೆಚ್ಚು ಮಾಡುತ್ತಿವೆ. ಇದರಿಂದಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಇನ್ನು ಸಾಮಾನ್ಯ ಜನರೂ ಕೂಡ ಗೋಲ್ಡ್ ಬಾಂಡ್ ಗಳ ಬದಲಿಗೆ ಭೌತಿಕ ಚಿನ್ನಕ್ಕೆ ಅಂದರೆ ಚಿನ್ನದ ಗಟ್ಟಿ, ಕಾಯಿನ್ ಗಳಿಗೆ ಹೆಚ್ಚಿನ ಮನ್ನಣೆ ನೀಡುತ್ತಿದ್ದಾರೆ. ಇದರಿಂದಾಗಿ ಚಿನ್ನ-ಬೆಳ್ಳಿ ದರ ನಾಗಾಲೋಟದಲ್ಲಿ ಏರುತ್ತಿದೆ. ಅದರಂತೆ ಸಂಕ್ರಾಂತಿ ನಂತರ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1.50 ಲಕ್ಷ ರೂ. ಹಾಗೂ ಬೆಳ್ಳಿ ಕೆ.ಜಿ.ಗೆ 2.50 ಲಕ್ಷ ರೂ. ತಲುಪುವ ಸಂಭವವಿದೆ ಎನ್ನುತ್ತದೆ ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ.
ಪ್ರಸ್ತುತ ಭಾರತದಲ್ಲಿ ಶೇ.1ರಷ್ಟು ಬೆಳ್ಳಿ (ರಾಜಸ್ಥಾನದಲ್ಲಿ ಬೆಳ್ಳಿ ಸಿಗುತ್ತದೆ) ಹಾಗೂ ಶೇ.0.1 ರಷ್ಟು ಚಿನ್ನ ಉತ್ಪಾದಿಸಲಾಗುತ್ತಿದೆ. ಇನ್ನುಳಿದಂತೆ ಅಗತ್ಯವಿರುವ ಬೆಳ್ಳಿ, ಬಂಗಾರವನ್ನು ಚೀನಾ, ಆಸ್ಪ್ರೇಲಿಯಾ, ಆಫ್ರಿಕನ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಬಳಕೆ ಮತ್ತು ಹೂಡಿಕೆ ಎರಡೂ ಹೆಚ್ಚಾದ ಹಿನ್ನೆಲೆಯಲ್ಲಿ ಚಿನ್ನ, ಬೆಳ್ಳಿಯ ಬೆಲೆಗಳು ನಾಗಾಲೋಟದಲ್ಲಿ ಓಡುತ್ತಿವೆ. ಇದಲ್ಲದೇ, ಅಂತಾರಾಷ್ಟ್ರೀಯ ಮಾರುಕಟ್ಟೆಯ ದಿಕ್ಕು, ಕರೆನ್ಸಿ ಅಸ್ಥಿರತೆ ಹಾಗೂ ರಾಜಕೀಯ ಅನಿಶ್ಚಿತತೆ ಕಾರಣಕ್ಕೆ ಈ ಲೋಹಗಳ ಬೆಲೆ ಗಗನಕ್ಕೇರುತ್ತಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.
