ತಮ್ಮ ಕಕ್ಷೀದಾರರ ಪರವಾಗಿ ಇ-ಮೇಲ್ ಕಳುಹಿಸಿದ್ದ ಕಾರಣಕ್ಕೆ ವಕೀಲರೊಬ್ಬರಿಗೆ ಸಮನ್ಸ್ ಜಾರಿ ಮಾಡಿದ ಸಿಬಿಐ ತನಿಖಾಧಿಕಾರಿ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್ ತನಿಖಾಧಿಕಾರಿ ತನ್ನ ಎದುರು ಹಾಜರಾಗುವಂತೆ ಸೂಚನೆ ನೀಡಿದೆ.
ತನ್ನ ಕಕ್ಷೀದಾರನ ಪರ ಇಮೇಲೆ ಕಳುಹಿಸಿದ್ದಕ್ಕೆ ತನಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಸಿಬಿಐ ಕ್ರಮ ಪ್ರಶ್ನಿಸಿ ವಕೀಲ ಸಚಿನ್ ಬಾಜಪೇಯಿ ಎಂಬುವರು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸ್ವರಣಕಾಂತ ಶರ್ಮ ಅವರಿದ್ದ ಪೀಠ ತನಿಖಾಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತನಿಖಾಧಿಕಾರಿಗಳ ಇಂತಹ ವರ್ತನೆ ಮುಂದುವರೆಯಲು ಅವಕಾಶ ನೀಡಿದರೆ ವಕೀಲರು ಕೆಲಸ ಮಾಡುವುದೇ ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟು, ಸಿಬಿಐ ಸಮನ್ಸ್ ಗೆ ತಡೆ ನೀಡಿದೆ.
ಅಲ್ಲದೇ, ತನಿಖಾಧಿಕಾರಿಯ ನಡೆ ಸೂಕ್ತವಾದದ್ದಲ್ಲ. ಇದಕ್ಕೆ ವಿವರಣೆ ನೀಡಲು ತನಿಖಾಧಿಕಾರಿ ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ತಿಳಿಸಿ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿದೆ.
ವಕೀಲ ಸಚಿನ್ ತಮ್ಮ ಕಕ್ಷೀದಾರರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ಕೊಡಿಸಿದ್ದರು. ನಂತರ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐಗೆ ವಿವರಣೆ ನೀಡಿ ಇಮೇಲ್ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿ ವಕೀಲರಿಗೂ ಹಾಜರಾಗಿ ಹೇಳಿಕೆ ನೀಡುವಂತೆ, ದಾಖಲೆಗಳನ್ನು ಸಲ್ಲಿಸುವಂತೆ ಸಮನ್ಸ್ ಜಾರಿ ಮಾಡಿದ್ದರು.
