ಕಟ್ಟಡ ನಿರ್ಮಾಣದ ವೇಳೆ ಒತ್ತುವರಿ ಬಗ್ಗೆ ಯಾರಾದರೂ ದೂರು ಸಲ್ಲಿಸಿದರೆ, ಆ ಬಗ್ಗೆ ತನಿಖೆ ನಡೆಸುವ ಅಧಿಕಾರ ಬಿಬಿಎಂಪಿಗೆ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಆದರೆ, ಮಂಜೂರಾದ ನಕ್ಷೆಯ ಪ್ರಕಾರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪಾಲಿಕೆ ತನಿಖೆ ನಡೆಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಟ್ಟಡ ನಿರ್ಮಾಣ ಸಂಸ್ಥೆ ಬಿಬಿಎಂಪಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯಪೀಠ, ಬಿಬಿಎಂಪಿ ನ್ಯಾಯಾಂಗ ಪ್ರಾಧಿಕಾರವಲ್ಲ, ಹಾಗಾಗಿ ಇಂತಹ ಪ್ರಕರಣಗಳಲ್ಲಿ ವ್ಯಾಜ್ಯದ ಬಗ್ಗೆ ವಿಚಾರಣೆ ನಡೆಸಲಾಗದು ಎಂದು ಹೇಳಿದೆ.
ಅಲ್ಲದೆ, “ಒತ್ತುವರಿ ಕುರಿತ ಎಲ್ಲಾ ಅಂಶಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ನಕ್ಷೆ ಮಂಜೂರಾತಿ ಅಥವಾ ನಿಯಮ ಉಲ್ಲಂಘನೆಯಂತಹ ಪ್ರಕರಣಗಳಲ್ಲಿ ಪಾಲಿಕೆಗೆ ಸಂಪೂರ್ಣ ಅಧಿಕಾರವಿದೆ. ನಿಯಮದ ಪ್ರಕಾರ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು,” ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ಹಿನ್ನೆಲೆ: ಚೆನ್ನೈ ಮೂಲದ ಎಮರಾಲ್ಡ್ ಹವೇನ್ ಡೆವಲಪ್‌ಮೆಂಟ್ ಲಿಮಿಟೆಡ್ ಕಂಪನಿಯು ನಗರದ ಬೇಗೂರು ಹೋಬಳಿಯ ಬಸಾಪುರ ಗ್ರಾಮದಲ್ಲಿ ತನ್ನ 4 ಎಕರೆ ಜಾಗದಲ್ಲಿ ತಳಮಹಡಿ ಹೊರತುಪಡಿಸಿ 18 ಮಹಡಿಗಳ ಕಟ್ಟಡವನ್ನು ನಿರ್ಮಾಣ ಮಾಡಿತ್ತು. ಆ ಬಳಿಕ ಕವಿತಾ ಶಂಕರ್ ಎಂಬುವರು ತಮ್ಮ ಒಂದು ಎಕರೆ ಜಾಗವನ್ನು ಕಂಪನಿಯು ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿ ಪಾಲಿಕೆಗೆ ದೂರು ನೀಡಿದ್ದರು.
ದೂರಿನ ಮೇರೆಗೆ 2023ರ ಸೆಪ್ಟೆಂಬರ್ 14ರಂದು ಬಿಬಿಎಂಪಿ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರು ಕಂಪನಿಗೆ ನೋಟಿಸ್ ನೀಡಿ, ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಿದ್ದರು. ಆ ನೋಟಿಸ್ ಅನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಕಂಪನಿ, ಭೂಮಿಯನ್ನು 2019ರಲ್ಲಿ ಖರೀದಿಸಲಾಗಿತ್ತು. ಅನಂತರ ಪಾಲಿಕೆಯಿಂದ ನಕ್ಷೆ ಅನುಮೋದನೆ ಪಡೆದು, ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸಿ ಕಟ್ಟಡ ನಿರ್ಮಾಣ ಚಟುವಟಿಕೆಯನ್ನು ಆರಂಭಿಸಲಾಗಿತ್ತು.
ಕವಿತಾ ಅವರು ಹಿಂದಿನ ಭೂ ಮಾಲೀಕರ ಕಡೆಯಿಂದ ಜಿಪಿಎ ಹೊಂದಿದ್ದಾರೆ. ಕಟ್ಟಡ ನಿರ್ಮಾಣ ಆರಂಭವಾದ ಬಳಿಕ ತಾವು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಜಾಗದ ಮಾಲೀಕರು ಎಂದು ದಾವೆ ಹೂಡಿದ್ದಾರೆ. ಆದರೆ, ಬಿಬಿಎಂಪಿಗೆ ಒತ್ತುವರಿಯ ಬಗ್ಗೆ ತನಿಖೆ ನಡೆಸುವ ಯಾವುದೇ ಅಧಿಕಾರವಿಲ್ಲ, ಆ ಅಧಿಕಾರ ಸಿವಿಲ್ ಕೋರ್ಟ್‌ಗೆ ಮಾತ್ರ ಇದೆ ಎಂದು ಕಂಪನಿ ವಾದಿಸಿತ್ತು.
