ಪಠ್ಯದಿಂದ ಗೋವಿನ ಹಾಡು ತೆಗೆದಾಗಿದೆ. ಭಗವದ್ಗೀತೆ ಸೇರಿಸುವುದು ಬೇಡ ಎಂದು ತಜ್ಞರು ತಿಳಿಸಿದ್ದಾರೆ ಎನ್ನಲಾಗಿದೆ. ಹಾಗಾದರೆ ಮಕ್ಕಳಿಗೆ ಏನನ್ನು ಕಲಿಸುತ್ತೀರಿ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಪ್ರಶ್ನಿಸಿದ್ದಾರೆ.
“ವಿದ್ಯಾರ್ಥಿಯ ಅಂಕಗಳಿಸುವಷ್ಟೇ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಪ್ರತಿಶತ ಅಂಕ ಗಳಿಸಿ ಅಮೆರಿಕಕ್ಕೆ ಹಾರಿ ಹೋದರೆ, ಇಲ್ಲಿ ಹೆತ್ತವರು ಜಾರಿ ಬಿದ್ದಾಗ ನೆರವಿನ ಹಸ್ತ ಚಾಚಲು ಯಾರೂ ಇಲ್ಲದೇ ಇದ್ದರೆ ಎಷ್ಟು ದುಡಿದು ಏನು ಪ್ರಯೋಜನ? ಹೆತ್ತವರನ್ನು ವೃದ್ಧಾಪ್ಯ ಕಾಲದಲ್ಲಿ ನೋಡಿಕೊಂಡು, ಉತ್ತಮ ದಾರಿಯಲ್ಲಿ ಸಂಪಾದನೆ ಮಾಡುವಂತಾಗಬೇಕು” ಎಂದು ಅವರು ಹೇಳಿದ್ದಾರೆ.
ದೈವ ಋಣ, ಋಷಿ ಋಣ, ಪಿತೃ ಋಣ, ರಾಷ್ಟ್ರ ಋಣವು ಎಲ್ಲರ ಮೇಲಿರುತ್ತದೆ. ಈ ಋಣವನ್ನು ಜೀವಿತಾವಧಿಯಲ್ಲಿ ತೀರಿಸಬೇಕು. ಮಿಡಿಯುವ ಗುಣ ಬೆಳೆಸಿಕೊಳ್ಳಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
ಬೆಂಗಳೂರಿನ ಕೂಟ ಮಹಾಜಗತ್ತು ಭಾನುವಾರ ಹಮ್ಮಿಕೊಂಡಿದ್ದ ʼನರಸಿಂಹ ಪ್ರಶಸ್ತಿ ಪ್ರದಾನʼ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಭಗವದ್ಗೀತೆಯನ್ನು ಶೈಕ್ಷಣಿಕ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಇತ್ತೀಚೆಗೆ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯವನ್ನು ಮತ್ತೆ ಮತ್ತೆ ವ್ಯಕ್ತಪಡಿಸುತ್ತಿರುವ ಬೆನ್ನಿಗೇ ರಾಜ್ಯ ರಾಜಕಾರಣದಲ್ಲಿ ಈ ಬಗ್ಗೆ ಪರ ವಿರೋಧದ ಚರ್ಚೆ ಆರಂಭವಾಗಿದೆ. ಇದು ಸಾರ್ವಜನಿಕ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಿಗೇ ನ್ಯಾ. ಶ್ರೀಶಾನಂದ ಅವರು ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವುದನ್ನು ಬೆಂಬಲಿಸಿ ಮಾತನಾಡಿರುವುದು ಗಮನ ಸೆಳೆದಿದೆ.
