News

ದೈಹಿಕ ಸಂಪರ್ಕದ ನಂತರ ಮದುವೆ ನಿರಾಕರಣೆ: ಆರೋಪಿಗೆ 10 ವರ್ಷ ಜೈಲು

Share It

ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ, ನಿನ್ನನ್ನೇ ನಾನು ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ದೈಹಿಕ ಸಂಬಂಧ ಬೆಳೆಸಿ, ನಂತರ ಮದುವೆ ನಿರಾಕರಿಸಿದ್ದ ವ್ಯಕ್ತಿಗೆ ಇಲ್ಲಿಯ 8 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ 10 ವರ್ಷ ಜೈಲು ಶಿಕ್ಷೆ ಹಾಗು 10,000 ಸಾವಿರ ರೂಪಾಯಿ ದಂಡ ವಿಧಿಸಿದೆ.

ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಧನಪಾಲ ಕ್ಯಾಮನ್ನವರ ಶಿಕ್ಷೆಗೊಳಗಾದ ಆರೋಪಿ. ಈತ ಮತ್ತು ದೂರುದಾರ ಮಹಿಳೆ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿ ರಜೆ ಮೇಲೆ ಊರಿಗೆ ಬಂದಾಗ ಇಬ್ಬರು ಸುತ್ತಾಡುತ್ತಿದ್ದರು.

2022 ರ ಏಪ್ರಿಲ್ 8 ರಂದು ಸಂಜೆ 7 ಗಂಟೆ ಸುಮಾರಿಗೆ ಆರೋಪಿ, ಮಹಿಳೆಯನ್ನು ಪುಸಲಾಯಿಸಿ ಅಮಟೂರ-ಬೇವಿನಕೊಪ್ಪ ರಸ್ತೆ ಬಳಿ ಜಮೀನಿಗೆ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸಿದ್ದ. ಮಹಿಳೆ ಇದು ಸರಿಯಲ್ಲ, ಇನ್ನು ನಮ್ಮಿಬ್ಬರದ್ದು ಮದುವೆಯಾಗಿರುವುದಿಲ್ಲ ಎಂದು ಹೇಳಿದರೂ ಆರೋಪಿ ಅವಳ ಮಾತು ಕೇಳದೆ ದೈಹಿಕ ಸಂಪರ್ಕ ನಡೆಸಿದ್ದ. ಅಲ್ಲದೆ ಆರೋಪಿ ರಜೆ ಮೇಲೆ ಊರಿಗೆ ಬಂದಾಗ ಪದೆ ಪದೇ ಹಲವು ಬಾರಿ ದೈಹಿಕ ಸಂಪರ್ಕ ನಡೆಸಿದ್ದ.

ಮದುವೆ ನಿರಾಕರಿಸಿದ ನಂತರ ದೂರು ನೀಡಿದ್ದ ಮಹಿಳೆ, ಆರೋಪಿಗೆ ನನ್ನನ್ನು ಮದುವೆ ಮಾಡಿಕೋ ಎಂದು ಹಲವು ಬಾರಿ ಹೇಳಿದರೂ ಆತ ಅದನ್ನು ಲೆಕ್ಕಿಸದೆ, ನೀನು ಈ ಬಗ್ಗೆ ಯಾರಿಗಾದರೂ ಹೇಳಿದರೆ ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸಿ ಮದುವೆ ಮಾಡಿಕೊಳ್ಳದ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 8 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಪುತ್ರ ದಿಂಡಲಕೊಪ್ಪ ಅವರು, ಆರೋಪ ಸಾಬೀತಾಗಿರುವುದರಿಂದ ಆರೋಪಿ ನಾಗರಾಜ ಧನಪಾಲ ಕ್ಯಾಮನ್ನವರನಿಗೆ 2025 ರ ಡಿಸೆಂಬರ್ 22ರಂದು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಕಿರಣ್ ಎಸ್. ಪಾಟೀಲ ವಾದ ಮಂಡಿಸಿದ್ದರು. ಅಧಿಕಾರಿಗಳಾದ ಕೆ.ಜಿ. ದೀಪು ಮತ್ತು ಶಿವಶಂಕರ ಆರ್. ಗಣಾಚಾರಿ ತನಿಖೆ ನಡೆಸಿದ್ದರು.


Share It

You cannot copy content of this page