News

SSLC ಫಲಿತಾಂಶ ಏರಿಕೆಗೆ ಶ್ರಮಿಸುವ ಶಿಕ್ಷಕರಿಗೆ ಪ್ರೋತ್ಸಾಹ ಧನ

Share It

SSLC ಫಲಿತಾಂಶ ಹೆಚ್ಚಳ ಮಾಡಲು ಶ್ರಮಿಸುವ ಸರ್ಕಾರಿ ಶಾಲಾ ಶಿಕ್ಷಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಅಂತಹ ಶಿಕ್ಷಕರಿಗೆ ಸರ್ಕಾರ ಒಂದು ಸಾವಿರ ರೂಪಾಯಿಗಳ ವಿಶೇಷ ಪ್ರೋತ್ಸಾಹ ಧನವನ್ನು ಘೋಷಿಸಿದೆ.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಪ್ರತಿಶತ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಫಲಿತಾಂಶ ಸುಧಾರಣೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಜಿಲ್ಲೆಗಳಲ್ಲಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿ ನೀಡಲು ಸರ್ಕಾರ ಮುಂದಾಗಿದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಳಪೆ ಫಲಿತಾಂಶ ದಾಖಲಿಸಿದ್ದ ಇಲ್ಲಿನ ಜಿಲ್ಲೆಗಳಲ್ಲಿ ಫಲಿತಾಂಶ​ ಸುಧಾರಣೆ ಜತೆಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ಕನಿಷ್ಠ 40 ಅಂಕಗಳನ್ನು ಪಡೆಯುವಂತೆ ಶಿಕ್ಷಕರು ಸಿದ್ಧಗೊಳಿಸಬೇಕಿದೆ. ಇದಕ್ಕಾಗಿ ಅವರು ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳಬೇಕಿದೆ. ಈ ಕುರಿತಂತೆ ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆಯನ್ನು ಸಹ ಹೊರಡಿಸಿದೆ.

ಮಕ್ಕಳು ಮತ್ತು ಶಿಕ್ಷಕರನ್ನು ಪ್ರೋತ್ಸಾಹಿಸಲು ಸರ್ಕಾರ ಈ ಘೋಷಣೆ ಮಾಡಿದೆ. ನಿಗದಿತ ಶಾಲಾ ಅವಧಿ ಮುಗಿದ ಬಳಿಕ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳ ಶಿಕ್ಷಕರು ವಿಶೇಷ ತರಗತಿ ಕೈಗೊಳ್ಳಬೇಕಿದೆ. ಈ ವೇಳೆ ವಿದ್ಯಾರ್ಥಿಗಳ ಬರವಣಿಗೆ ಕೌಶಲ್ಯ, ಪಾಠಗಳ ಪುನರಾವರ್ತನೆ ಮೂಲಕ ಅವರನ್ನು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಂತೆ ಮಾಡಬೇಕಿದೆ.

ಹೊಸ ವರ್ಷ ಜನವರಿ 2026 ರಿಂದ ಪ್ರೌಢಶಾಲೆಗಳಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಮುಂದಿನ ಮೂರು ತಿಂಗಳ ಅವಧಿಗೆ ಶಿಕ್ಷಕರು ತೆಗೆದುಕೊಳ್ಳಬೇಕಿದೆ ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.


Share It

You cannot copy content of this page