News

ಹೆಂಡತಿಯ ಪಿಂಚಣಿ ಗಂಡನ ಬದಲು ಮಕ್ಕಳಿಗೆ: ಕೇಂದ್ರದ ಸ್ಪಷ್ಟನೆ

Share It

ಕೌಟುಂಬಿಕ ಜೀವನ ಸುಗಮವಾಗಿ ಇರದಂತಹ ಪ್ರಕರಣಗಳಲ್ಲಿ ಮಹಿಳಾ ಉದ್ಯೋಗಿಗಳು ಅಥವಾ ಮಹಿಳಾ ಪಿಂಚಣಿದಾರರು ಪತಿಯ ಬದಲಾಗಿ ಮಕ್ಕಳ ಹೆಸರನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿದಾರರ ಕಲ್ಯಾಣ ಸಚಿವಾಲಯವು ಮಂಗಳವಾರ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದೆ.

”ವಿಚ್ಛೇದನ ಪ್ರಕರಣಗಳು ಅಥವಾ ದೌರ್ಜನ್ಯ ಪ್ರಕರಣಗಳ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳು/ಪಿಂಚಣಿದಾರರು ಈ ಸೌಲಭ್ಯದ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ. ಒಂದೊಮ್ಮೆ ಮಕ್ಕಳು ಅಪ್ರಾಪ್ತರಾಗಿದ್ದರೆ, ಅವರ ಪೋಷಕರಿಗೆ ಪಿಂಚಣಿ ಸಿಗುತ್ತದೆ. ಈ ತಿದ್ದುಪಡಿಯು ಮಹಿಳಾ ಉದ್ಯೋಗಿಗಳು ಹಾಗೂ ಮಹಿಳಾ ಪಿಂಚಣಿದಾರರ ಸಬಲೀಕರಣದ ನಿಟ್ಟಿನಲ್ಲಿ ಪ್ರಗತಿಪರ ತೀರ್ಮಾನವಾಗಿದೆ,” ಎಂದು ಸಚಿವಾಲಯ ತಿಳಿಸಿದೆ.

ಹಾಲಿ ನಿಯಮಗಳ ಪ್ರಕಾರ, ಪಿಂಚಣಿದಾರರ ಮರಣಾ ನಂತರ ಕುಟುಂಬ ಪಿಂಚಣಿಯು ಪಿಂಚಣಿದಾರರ ಸಂಗಾತಿಗೆ ಸೇರುತ್ತದೆ. ಅವರ ನಿಧನದ ನಂತರ, ಇಲ್ಲವೇ ಪಿಂಚಣಿ ಪಡೆಯಲು ಅನರ್ಹಗೊಂಡ ಪಕ್ಕದಲ್ಲಿ ಕುಟುಂಬದ ಇತರ ಸದಸ್ಯರಿಗೆ ಸೇರುತ್ತದೆ. ಈ ನಿಯಮಕ್ಕೆ ತಿದ್ದುಪಡಿ ತಂದು, ಮಹಿಳಾ ಉದ್ಯೋಗಿ ಅಥವಾ ಪಿಂಚಣಿದಾರರು ತಮ್ಮ ಮಕ್ಕಳನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡಬೇಕೆಂದು ಅನೇಕ ಇಲಾಖೆಗಳು ಶಿಫಾರಸು ಮಾಡಿದ್ದವು.

ಇದೀಗ ತಿದ್ದುಪಡಿ ನಿಯಮಗಳು, ಮಹಿಳಾ ಉದ್ಯೋಗಿಗಳು ತಮ್ಮ ಗಂಡನ ಬದಲು ಮಗು ಅಥವಾ ಮಕ್ಕಳ ಹೆಸರನ್ನು ಪಿಂಚಣಿಗಾಗಿ ನಾಮನಿರ್ದೇಶನ ಮಾಡಲು ಅವಕಾಶ ಒದಗಿಸಿದೆ. ಇದರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಅಥವಾ ಕೌಟುಂಬಿಕ ಹಿಂಸಾಚಾರಗಳಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಮತ್ತು ಭಾರತೀಯ ದಂಡ ಸಂಹಿತೆಯಡಿ ಅರ್ಜಿ ಸಲ್ಲಿಸಿದ ಎಲ್ಲಾ ಸಂದರ್ಭಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಈ ಸವಲತ್ತನ್ನು ಒದಗಿಸಲಾಗುತ್ತದೆ‌ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.


Share It

You cannot copy content of this page