ಸಾರ್ವಜನಿಕ ಸ್ಥಳದಲ್ಲಿರುವ ದೇವಾಲಯಕ್ಕೆ ದಲಿತರು ಪ್ರವೇಶಿಸದಂತೆ ಅಡ್ಡಿಪಡಿಸಿ, ಜಾತಿ ಹೆಸರಿನಲ್ಲಿ ನಿಂದಿಸಿ, ಹಲ್ಲೆ ನಡೆಸಿದ ಆರೋಪದಡಿ ಎಂಟು ಮಂದಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಇದೇ ವೇಳೆ, ಆಧುನಿಕ ಕಾಲದಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಆಚರಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, “ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ದೇವಾಲಯ ಪ್ರವೇಶ ನಿರಾಕರಿಸಿರುವುದು ಖಂಡನೀಯ. ಈ ರೀತಿಯ ಬೆಳವಣಿಗೆಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಬೆಚ್ಚಿ ಬೀಳಿಸುತ್ತವೆ. ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳಬೇಕು. ಈ ರೀತಿಯ ತಾರತಮ್ಯ ತಕ್ಷಣ ನಿಲ್ಲುವಂತಾಗಬೇಕು” ಎಂದು ಆದೇಶಿಸಿದೆ.
ತಮ್ಮ ವಿರುದ್ದ ದಾಖಲಿಸಿರುವ ಕ್ರಿಮಿನಲ್ ಕೇಸ್ ರದ್ದುಪಡಿಸುವಂತೆ ಕೋರಿ ದಾವಣಗೆರೆಯ ಏಳು ಮಂದಿ ಆರೋಪಿತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಹೈಕೋರ್ಟ್ ತನ್ನ ತೀರ್ಪಿನಲ್ಲಿ, ದೇವಾಲಯವೆಂದರೆ ಏಕತೆ ಮತ್ತು ಎಲ್ಲರೂ ಒಳಗೊಳ್ಳುವಿಕೆಯ ಸಂಕೇತ. ಜತೆಗೆ, ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರವೆಂದು ತಿಳಿದಿದ್ದೂ ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೇವಾಲಯ ಪ್ರವೇಶ ಮತ್ತು ಪೂಜೆಗೆ ನಿರಾಕರಿಸಿ ಅಡ್ಡಿಪಡಿಸುವ ಪ್ರಕ್ರಿಯೆಗಳು ಮುಂದುವರೆದಿರುವುದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ: ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ವಿನಾಯಕ ನಗರ ಕ್ಯಾಂಪ್‌ನ ಸಾವಿತ್ರಮ್ಮ ಮತ್ತವರ ಕುಟುಂಬ 2016ರ ಸೆಪ್ಟೆಂಬರ್ 12ರಂದು ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿತ್ತು. ಆಗ ಅರ್ಜಿದಾರರು ದೂರುದಾರರ ಜಾತಿ ಹೆಸರು ಉಲ್ಲೇಖಿಸಿ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಸಾವಿತ್ರಮ್ಮ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದರೆಂದು ಆರೋಪಿಸಿ ದೂರು ನೀಡಿದ್ದರು.
ಘಟನೆ ಸಂಬಂಧ ಮಲೆಬೆನ್ನೂರು ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು. ಆ ಬಳಿಕ ಪ್ರಕರಣ ರದ್ದು ಕೋರಿ ಪಾಂಡುರಂಗ ಭಟ್ ಹಾಗೂ ಇತರರು ಹೈಕೋರ್ಟ್ ಮೊರೆ ಹೋಗಿದ್ದರು.
